ಹೊಸನಗರ: ತಾಲ್ಲೂಕು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಏಪ್ರಿಲ್ ತಿಂಗಳಲ್ಲಿ 384 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಬಸ್ ನಿಲ್ದಾಣ, ಶಾಲೆ, ಅಂಗನವಾಡಿ, ಆಸ್ಪತ್ರೆ ಸುತ್ತಮುತ್ತ ನಿರ್ಭೀತಿಯಿಂದ ಓಡಾಡುವ ಇವು ನಿವಾಸಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿವೆ.
ಹೋಟೆಲ್, ಮಾಂಸದಂಗಡಿ, ವಠಾರದ ಸುತ್ತಮುತ್ತ ಬೀಡು ಬಿಟ್ಟಿರುವ ಬೀದಿ ನಾಯಿಗಳು ಕಾಲ್ನಡಿಗೆ ಹಾಗೂ ವಾಹನಗಳಲ್ಲಿ ಹೋಗುವವರನ್ನು ಬೆನ್ನಟ್ಟುತ್ತವೆ. ಬೀದಿ ಮಧ್ಯೆ, ಫುಟ್‌ಪಾತ್‌ನಲ್ಲಿ ಮಲಗಿರುವ ಇವು ಪಾದಚಾರಿಗಳಿಗೆ ಕಚ್ಚಿನ ನಿದರ್ಶನಗಳೂ ಇವೆ.
ಗುಂಪು ಗುಂಪಾಗಿ, ಪರಸ್ಪರ ಕಚ್ಚಾಡುವ ಇವು, ಚಿಕ್ಕ ಮಕ್ಕಳನ್ನು ಕಚ್ಚಿ ಗಾಯಗೊಳಿಸಿದ ಉದಾಹರಣೆಗಳು ತುಂಬಾ ಇವೆ. ನಾಯಿಗಳು ಏಕಾಏಕಿ ಅಡ್ಡ ಬಂದ ಕಾರಣ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ.
ಏಪ್ರಿಲ್‌ನಲ್ಲಿ ಹೆಚ್ಚು: ತಾಲ್ಲೂಕಿನಲ್ಲಿ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಒಟ್ಟು 394 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.
ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಲಸಿಕೆ ಪಡೆದಿರುವವರ ಮಾಹಿತಿಯ ಆಧಾರದ ಮೇಲೆ ಪ್ರಕರಣಗಳನ್ನು ಉಲ್ಲೇಖಿಸಲಾಗಿದ್ದು, ಇದರನ್ವಯ ಪ್ರತಿ ತಿಂಗಳು ನೂರಾರು ಮಂದಿ ಶ್ವಾನಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ.
ಮಾಹಿತಿಗಳ ಪ್ರಕಾರ 2024ರ ಡಿಸೆಂಬರ್‌ನಲ್ಲಿ 138, 2025ರ ಜನವರಿಯಲ್ಲಿ 126, ಫೆಬ್ರುವರಿಯಲ್ಲಿ 130, ಮಾರ್ಚ್‌ನಲ್ಲಿ 170 ಹಾಗೂ ಏಪ್ರಿಲ್ ತಿಂಗಳಲ್ಲಿ 384 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದು, ಲಸಿಕೆ ಪಡೆದುಕೊಂಡಿದ್ದಾರೆ.
ಹಳ್ಳಿಯಿಂದ ಪೇಟೆಗೆ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಎಲ್ಲಾ ವಾರ್ಡ್‌ಗಳೂ ಬೀದಿ ನಾಯಿಗಳ ಆವಾಸ ಸ್ಥಳವಾಗಿವೆ.
‘ಗ್ರಾಮೀಣ ಭಾಗದ ಜನರು ತಮ್ಮ ಮನೆಯಲ್ಲಿರುವ ನಾಯಿ ಮರಿಗಳನ್ನು ಪೇಟೆಗೆ ತಂದು ಬಿಡುತ್ತಿದ್ದಾರೆ. ಪೇಟೆಯಲ್ಲಿ ನಾಯಿ ಸಂಖ್ಯೆ ಹೆಚ್ಚಲು ಇದುವೇ ಕಾರಣ’ ಎಂದು ಸಾರ್ವಜನಿಕರೊಬ್ಬರು ಆರೋಪಿಸುತ್ತಾರೆ.
‘ನಾಯಿ ಕಡಿತದ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಪಟ್ಟಣ ಪಂಚಾಯಿತಿ ಎಚ್ಚೆತ್ತುಕೊಂಡಿಲ್ಲ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಚಿಕಿತ್ಸೆಯಾಗಲೀ ಅಥವಾ ಇನ್ಯಾವುದೇ ಕ್ರಮವಾಗಲೀ ಕೈಗೊಂಡಿಲ್ಲ’ ಎಂದು ನಾಗರಿಕರು ದೂರಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬೆಳಗಿನ ಜಾವ ವಾಕಿಂಗ್‌ಗೆ ಹೋಗಲು ಕಷ್ಟವಾಗುತ್ತಿದೆ. ಅವುಗಳ ನಿಯಂತ್ರಣಕ್ಕೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕುಪ್ರಭಾಮಣಿ ಗೃಹಿಣಿ ಹೊಸನಗರ
ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಆದೇಶ ಬಂದ ಬಳಿಕ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದ್ದೇವೆಹರೀಶ್ ಎಂ.ಎನ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಹೊಸನಗರ ತಾಲ್ಲೂಕಿನ ಎಲ್ಲ 10 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಲಸಿಕೆ ಲಭ್ಯವಿದೆ. ನಾಯಿ ಕಡಿತಕ್ಕೊಳಗಾದವರು ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕುಡಾ. ಸುರೇಶ್ ತಾಲ್ಲೂಕು ಆರೋಗ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.