
ಹೊಸನಗರ: ತಾಲ್ಲೂಕಿನ ಮುಂಬಾರು ಹಾಗೂ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಕೊಪ್ಪ ಮತ್ತು ದೊಡ್ಲಿಮನೆ ಗ್ರಾಮದ ಗ್ರಾಮಸ್ಥರು ತಮ್ಮ ಊರಿನ ಸಂಪರ್ಕ ರಸ್ತೆಯನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಗೌಡಕೊಪ್ಪ ಮತ್ತು ದೊಡ್ಲಿಮನೆ ಗ್ರಾಮದ ಅಂದಾಜು 50 ಕುಟುಂಬಗಳು ಸರ್ಕಾರರ ಮೂಲ ಸೌಕರ್ಯಗಳಿಂದ ದೂರ ಉಳಿದಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ಕುಟುಂಬಗಳು ಹೆಚ್ಚು ವಾಸಿಸುವ ಈ ಗ್ರಾಮಕ್ಕೆ ಉತ್ತಮ ಸಂಪರ್ಕ ರಸ್ತೆ ಇಲ್ಲ. ಇದ್ದ ಕಚ್ಚಾರಸ್ತೆ ಸಂಪೂರ್ಣ ಹಾಳಾಗಿದೆ. ಮಕ್ಕಳು, ವೃದ್ಧರು ಓಡಾಡುವುದು ದುಸ್ತರವಾಗಿದೆ. ವಾಹನ ಸಂಚಾರ ಕಷ್ಟವೇ ಸರಿ.
ಈ ಕುರಿತು ಗ್ರಾಮಸ್ಥರು ಸಾಕಷ್ಟು ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಸಂಪರ್ಕ ರಸ್ತೆಯನ್ನು ಶ್ರಮಾದಾನದ ಮೂಲಕ ನಿರ್ಮಾಣ ಮಾಡಿಕೊಂಡಿದ್ದಾರೆ.
‘ಗೌಡಕೊಪ್ಪ– ದೊಡ್ಲಿಮನೆ ಗ್ರಾಮದ ಸಂಪರ್ಕ ರಸ್ತೆಯನ್ನು ಗ್ರಾಮಸ್ಥರೇ ಒಗ್ಗೂಡಿ ದುರಸ್ತಿಗೊಳಿಸುವ ಮೂಲಕ ಸರ್ಕಾರದ ವ್ಯವಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಈ ಪ್ರತಿಭಟನೆ ರೂಪದ ನಮ್ಮ ಶ್ರಮದಾನಕ್ಕೆ ಆಡಳಿತ ವರ್ಗ ಬೆಲೆ ಕೊಡಬೇಕು. ಇಲ್ಲವಾದರೆ ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ಇದು ಹಿಡಿಶಾಪವಾಗಿ ಪರಿಣಮಿಸುತ್ತದೆ. ಇನ್ನಾದರೂ ಸಂಪರ್ಕ ರಸ್ತೆ ಉತ್ತಮ ಆಗಬೇಕು’ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಕೇಶವ, ದಿನೇಶ, ರಾಜೇಶ, ಬಾಲಚಂದ್ರ, ಓಂಕಾರಪ್ಪ, ಮಾಸ್ತೆಯಪ್ಪ, ಮಂಜು, ಯುವರಾಜ್, ಸುದರ್ಶನ್, ಸೀನ ಕುಲಾಲ್, ರಂಗಪ್ಪ, ರಾಜಪ್ಪ, ರಾಜೇಂದ್ರ, ಮಂಜುನಾಥ್, ನಾರಾಯಣ ಭಟ್ ಭಾಗಿಯಾಗಿದ್ದರು.
ಈ ರಸ್ತೆ ಮೂಲಕ ಪ್ರತಿದಿನ ಹತ್ತಾರು ಶಾಲಾ ವಿದ್ಯಾರ್ಥಿಗಳು ವೃದ್ಧರು ಅನಾರೋಗ್ಯ ಪೀಡಿತರು ಆಸ್ಪತ್ರೆ ಕಚೇರಿಗಳಿಗೆ ತೆರಳುತ್ತಾರೆ. ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಇಲ್ಲಿನ ಜನರ ನೆಮ್ಮದಿ ಕಾಪಾಡಬೇಕುಕೇಶವ– ದಿನೇಶ್ ಗೌಡಕೊಪ್ಪ
ಇಂದು ಶ್ರಮದಾನದ ಮೂಲಕ ಮಾಡಿದ ರಸ್ತೆ ದುರಸ್ತಿ ನಮ್ಮ ಪ್ರತಿಭಟನೆ ಆಗಿದೆ. ಇದರಿಂದ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಲಿದ್ದೇವೆರಾಜೇಶ್– ಬಾಲಚಂದ್ರ ಗ್ರಾಮಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.