ADVERTISEMENT

ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಾಸ್ಟೆಲ್‌: ಸರ್ಕಾರ ಆದೇಶ

‘ಪ್ರಜಾವಾಣಿ’ ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:36 IST
Last Updated 18 ಜುಲೈ 2019, 19:36 IST

ಶಿವಮೊಗ್ಗ: ಅರ್ಜಿ ಸಲ್ಲಿಸಿದ ಎಲ್ಲ ಪರಿಶಿಷ್ಟ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ ಸೌಲಭ್ಯ ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆ ಮರು ಆದೇಶ ಹೊರಡಿಸಿದೆ.

2013ರಲ್ಲಿ ಅಂದಿನ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಬೇಕು. ಇಲಾಖೆಯ ಹಾಸ್ಟೆಲ್‌ಗಳಲ್ಲಿ ಸೀಟು ಭರ್ತಿಯಾದ ನಂತರ ಬಾಡಿಗೆ ಕಟ್ಟಡ ಪಡೆದು ವಸತಿ, ಊಟ ಕಲ್ಪಿಸಬೇಕು ಎಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಈಚೆಗೆ ರಾಜ್ಯ ಸಮ್ಮಿಶ್ರ ಸರ್ಕಾರ ರದ್ದು ಮಾಡಿತ್ತು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪರದಾಟ ನಡೆಸಿದ್ದರು.

ಈ ಕುರಿತು ‘ಪ್ರಜಾವಾಣಿ’ ಜುಲೈ 14ರ ಸಂಚಿಕೆಯಲ್ಲಿ ‘ಹಾಸ್ಟೆಲ್‌ಗೆ ಪರಿಶಿಷ್ಟ ವಿದ್ಯಾರ್ಥಿಗಳ ಪರದಾಟ!’ ಎಂಬ ವಿಶೇಷ ವರದಿ ಪ್ರಕಟಿಸಿತ್ತು. ಹಾಸ್ಟೆಲ್‌ ಸಿಗುವ ಭರವಸೆ ಇಟ್ಟುಕೊಂಡು ದೂರದ ಊರುಗಳಿಂದ ನಗರ, ಪಟ್ಟಣಗಳಿಗೆ ಬಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ದುಬಾರಿ ಶುಲ್ಕ ತೆತ್ತು ಖಾಸಗಿ ಪಿ.ಜಿ.ಗಳ ಮೊರೆಹೋಗುತ್ತಿದ್ದಾರೆ. ಹಾಸ್ಟೆಲ್‌ ಸಿಗದವರಿಗೆ ವಿದ್ಯಾಸಿರಿಯೂ ಅನ್ವಯವಾಗುತ್ತಿಲ್ಲ ಎಂದು ಗಮನ ಸೆಳೆದಿತ್ತು.

ADVERTISEMENT

2013ರ ಆದೇಶ ರದ್ದು ಪಡಿಸಿ ಹೊರಡಿಸಿದ್ದ ಹೊಸ ಆದೇಶವನ್ನು ಬುಧವಾರ (ಜುಲೈ 17) ಹಿಂಪಡೆದಿರುವ ಸರ್ಕಾರದ ಉಪ ಕಾರ್ಯದರ್ಶಿ ಶಂಭುಲಿಂಗಯ್ಯ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯ ಕಲ್ಪಿಸಬೇಕು. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಅನುದಾನಕ್ಕೆ ಅನುಮೋದನೆ ಕೋರಿ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.