ADVERTISEMENT

ಚರಕ ಸಂಸ್ಥೆಯ ಸಮಸ್ಯೆ ಸದನದಲ್ಲಿ ಪ್ರಸ್ತಾಪಿಸುವೆ: ಶಾಸಕ ಎಚ್. ಹಾಲಪ್ಪ ಹರತಾಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 13:27 IST
Last Updated 4 ಸೆಪ್ಟೆಂಬರ್ 2020, 13:27 IST
ಸಾಗರಕ್ಕೆ ಸಮೀಪದ ಹೆಗ್ಗೋಡಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಚರಕ ಸಂಸ್ಥೆ ‘ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ’ ಚಳವಳಿ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಮಾತನಾಡಿದರು
ಸಾಗರಕ್ಕೆ ಸಮೀಪದ ಹೆಗ್ಗೋಡಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಚರಕ ಸಂಸ್ಥೆ ‘ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ’ ಚಳವಳಿ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಮಾತನಾಡಿದರು   

ಸಾಗರ: ‘ಕೈಮಗ್ಗ ನೇಕಾರಿಕೆ ಮೂಲಕ ಗ್ರಾಮೀಣ ಭಾಗದ ಹಿಂದುಳಿದ ಮಹಿಳೆಯರಿಗೆ ಕೆಲಸ ನೀಡಿದ ಚರಕ ಸಂಸ್ಥೆಯ ಸಮಸ್ಯೆ ಕುರಿತು ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸುವೆ’ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಭರವಸೆ ನೀಡಿದರು.

ಸಮೀಪದ ಹೆಗ್ಗೋಡಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಚರಕ ಸಂಸ್ಥೆ ‘ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ’ ಚಳವಳಿ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

‘ಚರಕ ಸಂಸ್ಥೆಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಅಧಿಕಾರಿಗಳ ವಿಳಂಬ ನೀತಿಯಿಂದ ತಲುಪದೆ ಇರುವ ವಿಷಯ ಈಗ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ADVERTISEMENT

‘ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಚರಕ ಸಂಸ್ಥೆ ಮುಚ್ಚುವ ಹಂತಕ್ಕೆ ಬಂದಿರುವುದು ಬೇಸರದ ಸಂಗತಿ. ಇದು ನಮ್ಮ ಭಾಗದ ಹೆಮ್ಮೆಯ ಸಂಸ್ಥೆ. ಅದನ್ನು ಮುಚ್ಚುವ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಮನವಿ ಮಾಡಿದ ಅವರು, ಚರಕಕ್ಕೆ ಅಗತ್ಯವಿರುವ ನೆರವು ನೀಡುವ ಸಂಬಂಧ ಮುಖ್ಯಮಂತ್ರಿ ಜೊತೆಗೂ ಚರ್ಚಿಸುತ್ತೇನೆ’ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ‘ಗ್ರಾಮೀಣ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ತೋರಿಸಿಕೊಟ್ಟಿರುವುದು ಚರಕದ ಹೆಗ್ಗಳಿಕೆ. ಈ ಸಂಸ್ಥೆಯ ಆಶಯವನ್ನು ನಾವು ಅರ್ಥ ಮಾಡಿಕೊಂಡರೆ ಮಾತ್ರ ಇದನ್ನು ಉಳಿಸಲು ಸಾಧ್ಯ. ಕೇವಲ ವ್ಯವಹಾರಿಕ ದೃಷ್ಟಿಯಿಂದ ಕೈಮಗ್ಗ ನೇಕಾರಿಕೆಯನ್ನು ನೋಡುವ ಕ್ರಮ ಬದಲಾಗಬೇಕು’ ಎಂದರು.

ಚರಕದ ಸಂಸ್ಥಾಪಕ ಪ್ರಸನ್ನ, ‘ಕೈಮಗ್ಗ ಹಾಗೂ ಜವಳಿ ಇಲಾಖೆಯು ಕೈಮಗ್ಗ ನೇಕಾರಿಕೆಯನ್ನು ಒಂದು ಕೈಗಾರಿಕೆಯೆಂದು ಪರಿಗಣಿಸುತ್ತಿಲ್ಲ. ಇತರ ಕೈಗಾರಿಕೆಗಳಿಗೆ ನೆರವು ನೀಡುವಲ್ಲಿ ತೋರುವ ಆಸಕ್ತಿಯನ್ನು ಕೈಮಗ್ಗ ನೇಕಾರಿಕೆಗೆ ನೆರವು ನೀಡುವಲ್ಲಿ ತೋರುತ್ತಿಲ್ಲ. ಈ ಮನೋಭಾವ ಬದಲಾದರೆ ಮಾತ್ರ ಕೈಮಗ್ಗ ನೇಕಾರಿಕೆ ಉಳಿಯಲು ಸಾಧ್ಯ’ ಎಂದು ಹೇಳಿದರು.

‘ದೇಶದ ಶೇ 70ರಷ್ಟು ಜನರು ಗ್ರಾಮಗಳಲ್ಲಿದ್ದಾರೆ. ಇಲ್ಲಿನ ಜನರಿಗೆ ಉದ್ಯೋಗ ದೊರಕಿದರೆ ಮಾತ್ರ ಪ್ರಧಾನಿ ಮೋದಿಯವರ ಆತ್ಮನಿರ್ಭರ ಹೇಳಿಕೆ ಸಾರ್ಥಕಗೊಳ್ಳುತ್ತದೆ. ಅದಾನಿ, ಅಂಬಾನಿಯಂತಹವರ ಬೆಳವಣಿಗೆಯಿಂದ ಆತ್ಮನಿರ್ಭರತೆ ಬೆಳೆಯುವುದಿಲ್ಲ’ ಎಂದರು.

ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಟಿ.ಡಿ. ಮೇಘರಾಜ್, ಗ್ರಾಮ ಸೇವಾ ಸಂಘದ ಅಭಿಲಾಷ್, ರುದ್ರಪ್ಪ, ಮಹಾಲಕ್ಷ್ಮಿ, ಪದ್ಮಶ್ರೀ , ರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ, ಯೇಸುಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.