ADVERTISEMENT

‘ಶಾಲಾ ಹಂತದಲ್ಲೇ ಮಕ್ಕಳ ಪ್ರತಿಭೆ ಗುರುತಿಸಿ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 4:10 IST
Last Updated 30 ಅಕ್ಟೋಬರ್ 2022, 4:10 IST
ಸಾಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಉದ್ಘಾಟಿಸಿದರು.
ಸಾಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಉದ್ಘಾಟಿಸಿದರು.   

ಸಾಗರ: ಶಾಲಾ ಹಂತದಲ್ಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮನಸ್ಥಿತಿ ಪೋಷಕರಿಗೆ ಅತ್ಯಗತ್ಯ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.

ಇಲ್ಲಿನ ಸುಭಾಷ್ ನಗರ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಏರ್ಪಡಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸದೇ ಇದ್ದರೆ ಅನೇಕ ಬಾರಿ ಅಂತಹ ಪ್ರತಿಭೆಗಳು ಬೆಳಕಿಗೆ ಬಾರದೆ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಪ್ರತಿಭಾವಂತ ಮಕ್ಕಳು ಸಮಾಜದ ಆಸ್ತಿ ಇದ್ದಂತೆ. ಕೋವಿಡ್ ಸಂದರ್ಭದಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಉಂಟಾದ ಕೊರತೆಯನ್ನು ಈಗ ನೀಗಿಸುವ ಅಗತ್ಯವಿದೆ ಎಂದರು.

‘ಕಲಾ ಸಂಸ್ಕೃತಿಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾಟಿಸಬೇಕಾದರೆ ಸಾಂಸ್ಕೃತಿಕ ಚಟುವಟಿಕೆ ನಿರಂತರವಾಗಿ ನಡೆಯುತ್ತಿರಬೇಕು. ಮಕ್ಕಳು ಹಾಗೂ ಯುವ ಜನರು ಇದರಲ್ಲಿ ಆಸಕ್ತಿ ತೋರಿದಾಗ ಮಾತ್ರ ನಮ್ಮ ಸಾಂಸ್ಕೃತಿಕ ಪರಿಸರ ಸಮೃದ್ಧವಾಗಿರುತ್ತದೆ’ ಎಂದುನಗರಸಭೆ ಉಪಾಧ್ಯಕ್ಷ ವಿ. ಮಹೇಶ್ ಹೇಳಿದರು.

ADVERTISEMENT

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್., ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಜಿ. ಪರಮೇಶ್ವರಪ್ಪ, ಪ್ರಮುಖರಾದ ಡಿ. ಗಣಪತಪ್ಪ, ದತ್ತಾತ್ರೇಯ ಭಟ್, ಲಕ್ಷ್ಮಣ್ ಆರ್. ನಾಯ್ಕ್, ಜನಾರ್ದನಪೂಜಾರಿ ಇದ್ದರು.

ಅಪೇಕ್ಷಾ ತಂಡದವರು ಪ್ರಾರ್ಥಿಸಿದರು. ಉಮೇಶ್ ಸ್ವಾಗತಿಸಿದರು. ವಿ.ಟಿ. ಸ್ವಾಮಿ ವಂದಿಸಿದರು. ರಮೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.