ADVERTISEMENT

ಶಿವಮೊಗ್ಗ: ಸರ್ಕಾರಿ ಶಾಲೆಗಳತ್ತ ಹೆಚ್ಚಿದ ಒಲವು

ಖಾಸಗಿ ಶಾಲೆ ವ್ಯಾಮೋಹದಿಂದ ವಿಮುಖರಾದ ಪೋಷಕರು; ಸರ್ಕಾರಿ ಶಾಲೆಗೆ 12,435 ಮಕ್ಕಳು ದಾಖಲು

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:41 IST
Last Updated 26 ಜುಲೈ 2021, 3:41 IST
ಎನ್‌.ಎಂ.ರಮೇಶ್‌
ಎನ್‌.ಎಂ.ರಮೇಶ್‌   

ಶಿವಮೊಗ್ಗ: ಕೊರೊನಾ ಲಾಕ್‌ಡೌನ್‌ ನಂತರ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಖಾಸಗಿ ಶಾಲೆಗಳ ಬೆನ್ನುಹತ್ತಿದ್ದ ಪಾಲಕರು ಸರ್ಕಾರಿ ಶಾಲೆಗಳತ್ತ ಚಿತ್ತ ಹರಿಸಿದ್ದಾರೆ.

ಮಕ್ಕಳಿಲ್ಲದೇ ಬಾಗಿಲು ಮುಚ್ಚುವ ಸ್ಥಿತಿ ತಲುಪಿದ್ದ ಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಹಿಂದಿನ ಶೈಕ್ಷಣಿಕ ವರ್ಷದಲ್ಲೂ ಕೊರೊನಾ ಸಂಕಷ್ಟದ ಕಾರಣ ಶಾಲೆಗಳು ಆರಂಭವಾಗಲಿಲ್ಲ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಯೋಜನೆ ಆರಂಭಿಸಲಾಗಿತ್ತು. ಜತೆಗೆ ಖಾಸಗಿ ಶಾಲೆಗಳಲ್ಲಿ ಶೇ 70ರಷ್ಟು ಶುಲ್ಕ ಭರಿಸಲು ಸರ್ಕಾರ ಆದೇಶಿಸಿತ್ತು. ಕೊರೊನಾ ಸಂಕಷ್ಟದ ಕಾರಣ ಕೆಲಸವಿಲ್ಲದೆ ಪರಿತಪಿಸುತ್ತಿದ್ದ ಪೋಷಕರು ಕಡಿಮೆ ಶುಲ್ಕವನ್ನು ಪಾವತಿಸಲೂ ಪರದಾಡುವಂತಾಗಿತ್ತು. ಹೀಗಾಗಿ ಸರ್ಕಾರಿ ಶಾಲೆಗಳ ದಾಖಲಾತಿ ಏರಿಕೆಯಾಗಿದೆ.

ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರು ಈಗ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡುತ್ತಿರುವುದು ಕಂಡುಬರುತ್ತಿದೆ. ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿ ಈವರೆಗೆ ಒಂದನೇ ತರಗತಿಗೆ ಖಾಸಗಿ ಶಾಲೆಗೆ 3,144 ಮಕ್ಕಳು ದಾಖಲಾಗಿದ್ದರೆ, ಸರ್ಕಾರಿ ಶಾಲೆಗೆ 12,435 ಮಕ್ಕಳು ದಾಖಲಾಗಿದ್ದಾರೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಐದು ಪಟ್ಟು ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ದಾಖಲಾತಿಗೆ ಇನ್ನೂ ಸಮಯ ಇರುವ ಕಾರಣ ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ADVERTISEMENT

ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ: ಕೊರೊನಾ ಕಾರಣದಿಂದಾಗಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ. ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 800 ಮಕ್ಕಳು ದಾಖಲಾತಿ ಪಡೆಯಲು ಅವಕಾಶವಿದೆ. ಈ ವರ್ಷ ಸಾವಿರಕ್ಕೂ ಅಧಿಕ ಮಕ್ಕಳು ಪ್ರವೇಶ ಪಡೆದಿದ್ದಾರೆ. ಒಂದು ತರಗತಿಗೆ ಎರಡು ವಿಭಾಗಗಳನ್ನು ತೆರೆಯಲಾಗಿದೆ. ಶಾಲೆಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದು, ‍ಪಕ್ಕದ ಪ್ರೌಢಶಾಲೆಯಲ್ಲಿ ಹೆಚ್ಚುವರಿ ಇದ್ದ ಕೊಠಡಿಗಳನ್ನು ಬಳಸಿಕೊಳ್ಳಲಾಗಿದೆ.

ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳು ಸೇರಿ ಜಿಲ್ಲೆಯಲ್ಲಿ 1,841 ಸರ್ಕಾರಿ ಶಾಲೆಗಳಿವೆ. ಒಟ್ಟು ಶಾಲೆಗಳಲ್ಲಿ 8,773 ಕೊಠಡಿಗಳಿವೆ. 6,454 ಕೊಠಡಿಗಳು ಉತ್ತಮ ಸ್ಥಿತಿಯಲ್ಲಿದ್ದು, 1,161 ಕೊಠಡಿಗಳು ಭಾಗಶಃ, 1,158 ಕೊಠಡಿಗಳಿಗೆ ಪೂರ್ಣ ಪ್ರಮಾಣದ ದುರಸ್ತಿಯ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.