ADVERTISEMENT

12 ವರ್ಷಗಳ ನಂತರ ಸ್ಟೇಡಿಯಂನಲ್ಲಿ ಸ್ವಾತಂತ್ರ‍್ಯೋತ್ಸವ

ಸಾರ್ವಜನಿಕರ ಬೇಡಿಕೆಗೆ ಮನ್ನಣೆ, ಸಿದ್ಧತೆಗೆ ಸೂಚನೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 3:07 IST
Last Updated 30 ಜುಲೈ 2025, 3:07 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಶಿವಮೊಗ್ಗ: ಪ್ರತೀ ವರ್ಷ ಆಗಸ್ಟ್ 15ರಂದು ಸಾಗರ ರಸ್ತೆಯ ಡಿಎಆರ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಯೋಜಿಸುತ್ತಿದ್ದ ಜಿಲ್ಲಾಡಳಿತ, ಈ ಬಾರಿ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಆ ಸಂಭ್ರಮವನ್ನು ನೆಹರೂ ಕ್ರೀಡಾಂಗಣಕ್ಕೆ ವರ್ಗಾಯಿಸುತ್ತಿದೆ. 

ನೆಹರೂ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದ್ದರಿಂದ ಅದರ ಸುರಕ್ಷತೆಯ ಕಾರಣಕ್ಕೆ 2013ರಿಂದ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಡಿಎಆರ್ ಮೈದಾನಕ್ಕೆ ವರ್ಗಾಯಿಸಿತ್ತು. ಮೈದಾನ ಚಿಕ್ಕದಾಗಿದ್ದು, ಕುಳಿತುಕೊಳ್ಳಲು ಸಮರ್ಪಕ ವ್ಯವಸ್ಥೆ ಇಲ್ಲದೇ ಸಾರ್ವಜನಿಕರ ಆಕ್ಷೇಪಕ್ಕೂ ಕಾರಣವಾಗಿತ್ತು. ಹೀಗಾಗಿ ರಾಷ್ಟ್ರೀಯ ಮತ್ತು ನಾಡಹಬ್ಬಗಳು ಜಿಲ್ಲೆಯ ಆಡಳಿತ ಯಂತ್ರ, ವಿದ್ಯಾರ್ಥಿಗಳು ಹಾಗೂ ಮಾಧ್ಯಮಗಳಿಗೆ ಮಾತ್ರ ಸೀಮಿತ ಎಂಬಂತಾಗಿತ್ತು. 

ವಿಶೇಷವೆಂದರೆ 12 ವರ್ಷಗಳ ನಂತರ ನೆಹರೂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಗರಿಗೆದರಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.  

ADVERTISEMENT

ಸಾರ್ವಜನಿಕರ ಬೇಡಿಕೆಗೆ ಮನ್ನಣೆ: ಡಿ.ಸಿ 

ನಗರದಲ್ಲಿ ಮಂಗಳವಾರ ಸ್ವಾತಂತ್ರ‍್ಯೋತ್ಸವದ ಪೂರ್ವ ಸಿದ್ಧತಾ ಸಭೆಯ ಅ‍ಧ್ಯಕ್ಷತೆ ವಹಿಸಿ ಮಾತನಾಡಿದ ಗುರುದತ್ತ ಹೆಗಡೆ, ಈ ಬಾರಿ ಸಾರ್ವಜನಿಕರ ಒತ್ತಾಯದ ಮೇರೆಗೆ ಡಿಎಆರ್ ಮೈದಾನದ ಬದಲು ನೆಹರೂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ನಗರದ ಹೃದಯಭಾಗದಲ್ಲಿ ಈ ಬಾರಿಯ ಸ್ವಾತಂತ್ರ‍್ಯೋತ್ಸವ ಆಚರಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಭೆಯಲ್ಲಿ ತಿಳಿಸಿದರು. 

ಸ್ವಾತಂತ್ರ‍್ಯೋತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸಲು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಿ, ಜವಾಬ್ದಾರಿ ನೀಡಲಾಗಿದೆ. ತಮಗೆ ವಹಿಸಲಾದ ಹೊಣೆಗಾರಿಕೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 

ವೇದಿಕೆ ಅಲಂಕಾರ, ರಾಷ್ಟ್ರಗೀತೆ, ನಾಡಗೀತೆ, ಪರೇಡ್‌ ಸಿದ್ಧತೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಪರೇಡ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಮರ್ಪಕ ತರಬೇತಿ ನೀಡಬೇಕು ಎಂದು ಸೂಚಿಸಿದರು. 

ಸಭೆಯಲ್ಲಿ ಎಸ್ಪಿ ಜಿ.ಕೆ.ಮಿಥುನಕುಮಾರ್‌, ಎಡಿಸಿ ಸಿದ್ಧಲಿಂಗರೆಡ್ಡಿ,  ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಸುಜಾತಾ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ತಹಶೀಲ್ದಾರ್‌ ರಾಜೀವ್‌ ಉಪಸ್ಥಿತರಿದ್ದರು.

Quote - 12 ವರ್ಷಗಳ ನಂತರ ನೆಹರೂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. ಸರ್ಕಾರೇತರ ಸಂಘ-ಸಂಸ್ಥೆಗಳು ವಾಣಿಜ್ಯ ಸಂಸ್ಥೆಗಳೂ ಈ ಸಂಭ್ರಮಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿ ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.