ADVERTISEMENT

ಸಾಗರದ ಮಾರಿಕಾಂಬಾ ದೇವಾಲಯ: ಕಾನೂನಿನ ಚೌಕಟ್ಟು; 6 ದಶಕಗಳ ಗೊಂದಲಕ್ಕೆ ತೆರೆ

ಆರು ದಶಕಗಳ ಗೊಂದಲಕ್ಕೆ ತೆರೆ ಎಳೆದ ಜಿಲ್ಲಾ ನ್ಯಾಯಾಲಯ

ಎಂ.ರಾಘವೇಂದ್ರ
Published 16 ಆಗಸ್ಟ್ 2025, 7:39 IST
Last Updated 16 ಆಗಸ್ಟ್ 2025, 7:39 IST
ಮೂರು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಯಲ್ಲಿ ಪ್ರತಿಷ್ಠಾಪಿಸುವ ಮಾರಿಕಾಂಬಾ ದೇವಿಯ ಮೂರ್ತಿ (ಸಂಗ್ರಹ ಚಿತ್ರ)
ಮೂರು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಯಲ್ಲಿ ಪ್ರತಿಷ್ಠಾಪಿಸುವ ಮಾರಿಕಾಂಬಾ ದೇವಿಯ ಮೂರ್ತಿ (ಸಂಗ್ರಹ ಚಿತ್ರ)   

ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ದೇವಾಲಯದ ಆಡಳಿತ ಕಾನೂನಿನ ಚೌಕಟ್ಟಿಗೆ ಒಳಪಡುವ ನಿಟ್ಟಿನಲ್ಲಿ ಶಿವಮೊಗ್ಗದ ಜಿಲ್ಲಾ ನ್ಯಾಯಾಲಯ ಈಚೆಗೆ ತೀರ್ಪು ನೀಡಿದೆ. ಇದರಿಂದ ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟಂತೆ ಕಳೆದ ಆರು ದಶಕಗಳಿಂದ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. 

ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ, ಮೂರು ವರ್ಷಗಳಿಗೊಮ್ಮೆ ನಡೆಯುವ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರಿಕಾಂಬಾ ಜಾತ್ರೆಯನ್ನು ಸಂಘಟಿಸುವ ಆಡಳಿತ ಸಮಿತಿಗೆ ಈವರೆಗೆ ಕಾನೂನಿನ ಚೌಕಟ್ಟು ಇರಲಿಲ್ಲ. ಈ ಕಾರಣಕ್ಕೆ ಆಡಳಿತ ನಡೆಸಿದವರ ಮೇಲೆ ಹಲವು ಲೋಪ ಎಸಗಿದ ಆರೋಪಗಳು ಕೇಳಿ ಬರುವುದು ಸಹಜ ಎನ್ನುವಂತಾಗಿತ್ತು. 

1966ನೇ ಸಾಲಿನಲ್ಲೇ ಆಗಿನ ದೇವಸ್ಥಾನದ ಆಡಳಿತ ಸಮಿತಿ ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದಲ್ಲಿ ದೇವಸ್ಥಾನದ ಆಡಳಿತ ನಿರ್ವಹಣೆ ಸಂಬಂಧ ರೂಪುರೇಷೆ ಕಲ್ಪಿಸುವಂತೆ ಕೋರಿ ಸ್ಕೀಂ ದಾವೆಯನ್ನು ಸಲ್ಲಿಸಿತ್ತು. 1967ರಲ್ಲಿ ಈ ದಾವೆ ತೀರ್ಮಾನವಾಗಿದ್ದರೂ, ನ್ಯಾಯಾಲಯದ ಅಂದಿನ ಆದೇಶ ಕಾರ್ಯಗತಗೊಂಡಿರಲಿಲ್ಲ. 

ADVERTISEMENT

ಈ ನಡುವೆ ಈಗಿನ ಸಮಿತಿ 2019ರಲ್ಲಿ ಈ ಹಿಂದಿನ ಸ್ಕೀಂ ದಾವೆಯ ಮರು ಜಾರಿಗೆ ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು. 1966ರಲ್ಲಿ ರೂಪುಗೊಂಡ ಬೈಲಾದ ನಿಯಮಗಳನ್ನು ಈ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲು ಸಮಿತಿ ಕೋರಿತ್ತು. 

ಆ ಪ್ರಕಾರ ಜಿಲ್ಲಾ ನ್ಯಾಯಾಲಯ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ನೂತನ ಬೈಲಾಕ್ಕೆ ಅನುಮೋದನೆ ನೀಡಿ ಜುಲೈ 25ರಂದು ಆದೇಶ ಹೊರಡಿಸಿದೆ. ಆದೇಶದ ದಿನದಿಂದ ಎರಡು ತಿಂಗಳೊಳಗೆ ಸಮಿತಿಯ ಸರ್ವ ಸದಸ್ಯರ ಸಭೆ ಕರೆದು ನೂತನ ನಿರ್ದೇಶಕರ ಆಯ್ಕೆಗೆ ಚುನಾವಣೆ ದಿನಾಂಕ ನಿಗದಿ ಮಾಡಿ ನ್ಯಾಯಾಲಯದ ಆದೇಶದ ದಿನದಿಂದ ಮೂರು ತಿಂಗಳೊಳಗೆ ನೂತನ ಸಮಿತಿಯನ್ನು ರಚಿಸುವಂತೆ ನಿರ್ದೇಶಿಸಲಾಗಿದೆ. 

ಒಟ್ಟು 36 ನಿರ್ದೇಶಕರನ್ನೊಳಗೊಂಡ ಸಮಿತಿಯಲ್ಲಿ 8 ಸ್ಥಾನವನ್ನು ವಿವಿಧ ಸಮುದಾಯಗಳಿಗೆ, 5 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವಂತೆ ನ್ಯಾಯಾಲಯ ಆದೇಶಿಸಿದೆ. ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲೆಯನ್ನು ಮಾಹಿತಿ ಹಕ್ಕಿನಡಿ ಪಡೆಯಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. 

ಈ ಮೂಲಕ ದೇವಸ್ಥಾನದ ಆಡಳಿತ ನಿರ್ವಹಿಸುವವರು ಅಧಿಕಾರ ದುರುಪಯೋಗ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ಜರುಗುವ ಉತ್ತರದಾಯಿತ್ವ ನಿಗದಿಯಾಗಿದೆ. ಇದರೊಂದಿಗೆ ಸಮಿತಿಯ ಪದಾಧಿಕಾರಿಗಳ ಆಯ್ಕೆ, ಆಡಳಿತ ನಿರ್ವಹಣೆ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಮುಂಬರುವ ದಿನಗಳಲ್ಲಿ ಪಾರದರ್ಶಕತೆ ಕಾಣಬಹುದು ಎಂಬ ನಿರೀಕ್ಷೆ ಮೂಡಿದೆ.

ದೇವಸ್ಥಾನದ ಆಡಳಿತದ ಗೊಂದಲಗಳಿಗೆ ತೆರೆ ಎಳೆದ ನ್ಯಾಯಾಲಯದ ತೀರ್ಪು ಮಾಹಿತಿ ಹಕ್ಕಿನ ಕಾಯ್ದೆ ವ್ಯಾಪ್ತಿಗೆ ಸೇರಿದ ಮಾರಿಕಾಂಬಾ ದೇವಾಲಯ ಅಧಿಕಾರ ದುರುಪಯೋಗ ಮಾಡಿದವರು ಕಾನೂನಿನ ಚೌಕಟ್ಟಿಗೆ

ಜಿಲ್ಲಾ ನ್ಯಾಯಾಲಯದ ಆದೇಶದಂತೆ ದೇವಸ್ಥಾನದ ಹಾಲಿ ಆಡಳಿತ ಸಮಿತಿಯವರು ಸಕಾಲದಲ್ಲಿ ಸರ್ವ ಸದಸ್ಯರ ಸಭೆ ಕರೆದು ಚುನಾವಣೆ ದಿನಾಂಕ ಘೋಷಿಸಬೇಕು. ನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಸಬೇಕು
ವಿ.ಗುರು ನಗರಸಭೆ ಮಾಜಿ ಸದಸ್ಯ
ಸೆಪ್ಟೆಂಬರ್ ತಿಂಗಳ 2 ನೇ ಅಥವಾ 3ನೇ ವಾರದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗುವುದು. ಚುನಾವಣೆ ನಡೆಸುವ ಸಂಬಂಧ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆಯಲಾಗಿದೆ
ಬಿ.ಗಿರಿಧರ ರಾವ್ ಕಾರ್ಯದರ್ಶಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.