ADVERTISEMENT

ಜಾತಿ ಜನಗಣತಿ ಮಂಡಿಸಿದರೆ ಸಾಲದು, ಚರ್ಚೆಯಾಗಲಿ: ಕೆ.ಎಸ್. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:39 IST
Last Updated 11 ಏಪ್ರಿಲ್ 2025, 15:39 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ‘ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2015ರ (ಜಾತಿ ಜನಗಣತಿ) ದತ್ತಾಂಶಗಳ ಅಧ್ಯಯನ ವರದಿ ಮಂಡಿಸಿದರೆ ಸಾಲದು. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಬೇಕು. ಇದರ ಜತೆ ಅನ್ವರ್‌ ಮಾಣಿಪ್ಪಾಡಿ ವರದಿ ಕೂಡ ಚರ್ಚೆಯಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

‘ಜಾತಿ ಜನಗಣತಿ ಮಂಡನೆ ಆದ ತಕ್ಷಣ ಅಧಿಕೃತವಾಗಿ ಜಾರಿಗೊಂಡಂತೆ ಆಗುವುದಿಲ್ಲ. ಇದನ್ನು ಎಲ್ಲ ಸಮುದಾಯಗಳನ್ನು ಕ್ರೂಢೀಕರಿಸಿಕೊಂಡು ಚರ್ಚೆ ನಡೆಸಬೇಕು. ಇದೇ ಸಿದ್ದರಾಮಯ್ಯ ಅವರು ಮೇಲ್ಜಾತಿ– ಕೆಳಜಾತಿ ಎಂದು ಹುಟ್ಟು ಹಾಕಿದರು. ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳಲು ಸಿದ್ದರಾಮಯ್ಯ ಹೊರಟಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. 

‘ಜಾತಿ ಜನಗಣತಿ ವರದಿ ಸಿದ್ಧಪಡಿಸಲು ₹180 ಕೋಟಿ ಖರ್ಚು ಮಾಡುವ ಮೊದಲೇ ಸಮಾಜ ಒಡೆಯುತ್ತದೆ ಎನ್ನುವುದನ್ನು ಯೋಚಿಸಬೇಕಿತ್ತು. ಬಿಜೆಪಿ ಸರ್ಕಾರದ ಆಡಳಿತದ ಸಂದರ್ಭದಲ್ಲಿ ಕಾಂತರಾಜ ಅವರೊಂದಿಗೆ ಚರ್ಚಿಸಿದ್ದೆ. ಮುಖ್ಯಮಂತ್ರಿ ಅವರು ಹೇಳಿದ ದಿನ ಕೊಡುತ್ತೇನೆ ಎಂದು ಅವರು ಹೇಳಿದ್ದರು. ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ಕೇಳಿದರೆ ಬೈಂಡ್ ಹಾಕಲು ಕೊಡಲಾಗಿದೆ ಎಂದು ಹೇಳಲಾಗಿತ್ತು. ಬೈಂಡ್ ಹಾಕಲು 8 ವರ್ಷ ಬೇಕಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶವಾದಿ’ ಎಂದು ಈಶ್ವರಪ್ಪ ಟೀಕಿಸಿದರು.

ADVERTISEMENT

ಗುತ್ತಿಗೆದಾರರ ಸಂಘದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಗುತ್ತಿಗೆದಾರರ ರಾಜ್ಯ ಸಂಘ ರಾಜಕೀಯ ಪಕ್ಷವಾಗಿರಬೇಕಿತ್ತು. ಆಡಳಿತಾರೂಢ ರಾಜಕೀಯ ಪಕ್ಷಗಳು ಕುಣಿಸಿದ ಹಾಗೆ ಸಂಘ ಕುಣಿಯುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಹೊರಿಸಲಾಗಿತ್ತು. ಆದರೆ, ಈ ಬಗ್ಗೆ ಒಂದೇ ಒಂದು ಪ್ರಕರಣ ಸಾಬೀತುಪಡಿಸಲಿಲ್ಲ. ಪ್ರಸ್ತುತ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಲಾಗುತ್ತಿದೆ. ಆದರೆ, ಈ ಬಗ್ಗೆಯೂ ಯಾವುದೇ ದಾಖಲೆ ನೀಡುತ್ತಿಲ್ಲ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಕೊಟ್ಟರೂ ಕೂಡ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಹೋಗಿ ಎನ್ನುವುದು ಸರಿಯಲ್ಲ. ಕೂಡಲೇ ಇವರು ವರ್ಗಾವಣೆಗೊಳ್ಳಬೇಕು ಎಂದು ಈಶ್ವರಪ್ಪ ಹೇಳಿದರು.

ಪ್ರಮುಖರಾದ ಮಹಾಲಿಂಗಶಾಸ್ತ್ರೀ, ಬಾಲು, ಸುವರ್ಣಶಂಕರ್, ಶ್ರೀಕಾಂತ್, ಮೋಹನ್ ಕುಮಾರ್ ಜಾದವ್, ಶಿವಾಜಿ, ಅನಿತಾ ಮಂಜುನಾಥ್, ರಾಧಾ ರಾಮಚಂದ್ರ, ಕುಬೇರಪ್ಪ, ಸೀತಾಲಕ್ಷ್ಮೀ, ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.