ADVERTISEMENT

ಪರಮೇಶ್ ಲಾಕರ್‌ನಲ್ಲಿ ₨ 6 ಕೋಟಿ ಪತ್ತೆ!

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 20:02 IST
Last Updated 5 ಏಪ್ರಿಲ್ 2019, 20:02 IST

ಶಿವಮೊಗ್ಗ: ಇಲ್ಲಿನ ಶಂಕರಮಠ ರಸ್ತೆಯ ಶ್ರುತಿ ಮೋಟಾರ್ಸ್‌ಮಾಲೀಕ, ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ಸಂಬಂಧಿ ಡಿ.ಟಿ.ಪರಮೇಶ್ ಅವರಿಗೆ ಸೇರಿದ ಲಾಕರ್‌ನಲ್ಲಿದ್ದ ₨ 6 ಕೋಟಿಯನ್ನು ಗುರುವಾರ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ ಶೋ ರೂಂನಿಂದ ಹೊರಗೆ ಬಂದ ಶ್ರುತಿ ಮೋಟಾರ್ಸ್ ಹಾಗೂ ನೆಕ್ಸಾ ಶೋ ರೂಂ ಸಿಬ್ಬಂದಿ ಆತಂಕದ ಕ್ಷಣಗಳನ್ನು ಎದುರಿಸಿದರು. ಐಟಿ ಅಧಿಕಾರಿಗಳು ಶೋ ರೂಂ ಮೇಲೂ ದಾಳಿ ನಡೆಸಬಹುದು ಎಂಬ ಕಳವಳ ಅವರ ಮುಖದಲ್ಲಿ ವ್ಯಕ್ತವಾಗುತ್ತಿತ್ತು.

‘ಹಲವು ದಿನಗಳಿಂದ ಮಾಲೀಕರು ಶೋ ರೂಂಗೆ ಬಂದಿಲ್ಲ. ಅವರು ಅವ್ಯವಹಾರ ಮಾಡಿರುವ ಸಾಧ್ಯತೆ ಇಲ್ಲ. ಎಲ್ಲ ಆರೋಪಗಳಿಂದ ಮುಕ್ತರಾಗಿ ಬರುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಮಾರುತಿ (ಶ್ರುತಿ ಮೋಟಾರ್ಸ್‌) ಶೂ ರೂಂ ಸಿಬ್ಬಂದಿ ಪ್ರತಿಕ್ರಿಯಿಸಿದರು.

ಅಧಿಕಾರಿಗಳು ಮಾರ್ಚ್‌ 28ರಂದು ಪರಮೇಶ್ ಅವರ ಶರಾವತಿ ನಗರದ ಪರಮೇಶ್ ಅವರ ಮನೆ, ಶೂ ರೂಂಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆಗ ಲಾಕರ್ ಕೀಗಳು ಸಿಕ್ಕಿರಲಿಲ್ಲ. ಅದರ ಮುಂದುವರಿದ ಭಾಗವಾಗಿ ಮತ್ತೆ ತಪಾಸಣೆ ನಡೆಸಲಾಗಿದೆ. ಎರಡೂ ಲಾಕ್‌ರ್‌ಗಳಲ್ಲಿ ₨ 500 ಹಾಗೂ 2 ಸಾವಿರ ಮುಖಬೆಲೆಯ ನೋಟುಗಳು ಇದ್ದವು ಎಂದು ಮೂಲಗಳು ತಿಳಿಸಿವೆ. ದಾವಣಗೆರೆ ಹಾಗೂ ಚಿಕ್ಕಮಗಳೂರಿನಲ್ಲೂ ಅವರು ಶೂ ರೂಂ ಹೊಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.