ಸಾಗರ: ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಎಸಗಿರುವ ಸಚಿವ ಜಮೀರ್ ಅಹ್ಮದ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಜೆಡಿಎಸ್ ಕಾರ್ಯಕರ್ತರು ಸೋಮವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
‘ವಸತಿ ಯೋಜನೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆಡಳಿತರೂಢ ಕಾಂಗ್ರೆಸ್ ಶಾಸಕರೇ ಹೇಳಿಕೆ ನೀಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ಮಾತಿನಂತೆ ಸಚಿವ ಜಮೀರ್ ಅಹ್ಮದ್ ಭ್ರಷ್ಟಾಚಾರ ನಡೆಸಿರುವುದು ಇದರಿಂದ ಸಾಬೀತಾಗಿದೆ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
‘ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟಿರುವ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವ ಮೂಲಕ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಮೂಲ ಸೌಕರ್ಯಗಳಿಗೆ ಹಣ ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಅಣ್ಣಪ್ಪ, ನಗರ ಘಟಕದ ಅಧ್ಯಕ್ಷ ವಸಂತ ಶೇಟ್, ಮಹಿಳಾ ವಿಭಾಗದ ರಾಜ್ಯ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ ನಾರಾಯಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.