ಕಾರ್ಗಲ್: ‘ವಿಶ್ವವಿಖ್ಯಾತ ಜೋಗ ಜಲಪಾತದ ಕೀರ್ತಿ ಜಗತ್ತಿನೆಲ್ಲೆಡೆ ಪಸರಿಸುವಂತೆ ಅಂಚೆ ಇಲಾಖೆಯಿಂದ ಜಲಪಾತದ ಶಾಶ್ವತ ಚಿತ್ರಿತ ರದ್ದತಿ ಬಿಡುಗಡೆ ಮಾಡಲಾಗಿದೆ’ ಎಂದು ಅಂಚೆ ಇಲಾಖೆಯ ಶಿವಮೊಗ್ಗ ವಿಭಾಗದ ಅಧೀಕ್ಷಕ ಜಯರಾಮ ಶೆಟ್ಟಿ ತಿಳಿಸಿದರು.
ಇಲ್ಲಿಗೆ ಸಮೀಪದ ಜೋಗದ ಅಂಚೆ ಇಲಾಖೆಯಲ್ಲಿ ಈಚೆಗೆ ನಡೆದ ಜೋಗ ಜಲಪಾತದ ಶಾಶ್ವತ ಚಿತ್ರಿತ ರದ್ದತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಜೋಗ ಜಲಪಾತ ಸೇರಿ ಪಾರಂಪರಿಕ, ಐತಿಹಾಸಿಕ ಮತ್ತು ವಿಶೇಷ ವ್ಯಕ್ತಿಗಳ 97 ಪ್ರಮುಖ ಮುದ್ರೆಗಳನ್ನು ರಚಿಸಿ ಶಾಶ್ವತ ಚಿತ್ರಿತ ರದ್ದತಿಯನ್ನು ಬಿಡುಗಡೆ ಮಾಡಲಾಗಿದೆ. ಜೋಗ ಜಲಪಾತದ ರಮಣೀಯ ಮುದ್ರೆ ಜೋಗ ಕಾರ್ಗಲ್ ಅಂಚೆ ಕಚೇರಿಯಿಂದ ರವಾನೆಯಾಗುವ ಎಲ್ಲ ಅಂಚೆ ಪತ್ರಗಳಲ್ಲಿಯೂ ಶಾಶ್ವತವಾಗಿ ಇನ್ನು ಮುಂದೆ ಮುದ್ರಿತವಾಗಲಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೋಗದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ರವಿಕುಮಾರ್, ಅಂಚೆ ಉಪ ಅಧೀಕ್ಷಕ ಗಣೇಶ್, ಜೋಗ ಅಂಚೆ ಪಾಲಕ ವಿಷ್ಣು ಕುಮಾರ್, ಅಂಚೆ ಮೇಲ್ವಿಚಾರಕ ಧನಂಜಯ ಗೌಡ, ಅಂಚೆ ವಿತರಕ ಹಿನ್ಸಾ ರಾಡ್ರಿಗಸ್, ಇಡುವಾಣಿ ಉಪ ಅಂಚೆ ಪಾಲಕ ಸುಬ್ರಮಣ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.