ADVERTISEMENT

ಕಲ್ಲಂಗಡಿ ಹಣ್ಣಿನಿಂದ ಜೋನಿ ಬೆಲ್ಲ

ಕಲ್ಲಂಗಡಿ ಬೆಳೆದು ನಷ್ಟದಲ್ಲಿರುವ ರೈತರಿಗೆ ಹೊಸ ಭರವಸೆ!

ರವಿ ನಾಗರಕೊಡಿಗೆ
Published 31 ಮೇ 2021, 2:01 IST
Last Updated 31 ಮೇ 2021, 2:01 IST
ಬೆಲ್ಲ ತಯಾರಿಕೆಯಲ್ಲಿ ಜಯರಾಮ ಶೆಟ್ಟರ ತಂಡ
ಬೆಲ್ಲ ತಯಾರಿಕೆಯಲ್ಲಿ ಜಯರಾಮ ಶೆಟ್ಟರ ತಂಡ   

ಹೊಸನಗರ (ಶಿವಮೊಗ್ಗ ಜಿಲ್ಲೆ): ಕಬ್ಬಿನ ಬೆಳೆಯಿಂದ ಸಿಹಿಯಾದ ಬೆಲ್ಲ ತಯಾರಾಗುವುದು ಈ ಹಿಂದಿನಿಂದಲೂ ಬಂದ ಪದ್ಧತಿ. ಆದರೆ, ಸಿಹಿ ಬೆಲ್ಲವನ್ನು ಬೇರೊಂದು ಬೆಳೆಯಿಂದಲೂ ತಯಾರಿಸಬಹುದು ಎಂಬ ಹೊಸ ಆವಿಷ್ಕಾರವನ್ನುನಿಟ್ಟೂರು ಗ್ರಾಮದ ಕೃಷಿಕ ಜಯರಾಮ ಶೆಟ್ಟಿ ಮಾಡಿದ್ದಾರೆ.

ಯೋಚನೆ ಬಂದದ್ದು ಹೇಗೆ: ಕಲ್ಲಂಗಡಿ ಹಣ್ಣಿನಿಂದ ಬೆಲ್ಲವನ್ನು ತಯಾರಿಸಬಹುದು ಎಂಬ ಆಲೋಚನೆ ಬಂದಿದ್ದೆ ಕೌತುಕವಾಗಿದೆ. ಲಾಕ್‌ಡೌನಿಂದ ತಾವು ಬೆಳೆದ ಕಲ್ಲಂಗಡಿಗೆ ಸೂಕ್ತ ಮಾರುಕಟ್ಟೆ ಲಭ್ಯವಿಲ್ಲದೆ ಚಿಂತೆಗೆ ಈಡಾದ ಸಂಪದಮನೆ ಜಯರಾಮ ಶೆಟ್ಟಿ ಅವರು ಕಲ್ಲಂಗಡಿ ಹಣ್ಣಿನಿಂದ ಏನೇನು ಮಾಡಬಹುದು ಎಂದು ಯೋಚಿಸಿದರು. ಹಲವು ಯೋಚನೆ ಬಂದು ಹೋದವು. ಕೊನೆಗೆ ಸಿಹಿಯಾದ ಬೆಲ್ಲ ತಯಾರಿಸುವ ಪ್ರಯೋಗಕ್ಕೆ ಇಳಿದರು. ಕೂಡಲೇ ಕಾರ್ಯ ಪ್ರವೃತರಾದ ಶೆಟ್ಟರು ತಮ್ಮ ಗೆಳೆಯರೊಂದಿಗೆ ಕಾರ್ಯಾಚರಣೆ ಶುರು ಮಾಡಿದರು. ಸವಿ ಸವಿ ಜೋನಿ ಬೆಲ್ಲ ಸಿದ್ಧಪಡಿಸಿ ಸೈ ಎನಿಸಿಕೊಂಡರು.

ನಿಟ್ಟೂರಿನ ಹೋಟೆಲ್ ಉದ್ಯಮಿ ಹಾಗೂ ರೈತ ಸಂಪದಮನೆ ಜಯರಾಮ ಶೆಟ್ಟಿ ತಮ್ಮ 8 ಎಕರೆ ಗದ್ದೆದಲ್ಲಿ ಕಲ್ಲಂಗಡಿ ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ಧುತ್ತನೆ ಬಂದೆರಗಿದ ಲಾಕ್‌ಡೌನ್ ಕಾರಣಕ್ಕೆ ಹಣ್ಣಿಗೆ ಮಾರುಕಟ್ಟೆ ಇಲ್ಲವಾಯಿತು. ಸುಮಾರು 15 ಟನ್‌ಗಳಷ್ಟು ಹಣ್ಣನ್ನು ಕೊಯ್ಯದೇ ಗದ್ದೆಯಲ್ಲಿಯೇ ಬಿಡುವಂತಾಯಿತು. ಗದ್ದೆಯಲ್ಲಿಯೇ ಕೊಳೆಯುತ್ತಿರುವ ಬೆಳೆ ನೋಡಿ ಬೇಸರಗೊಂಡಜಯರಾಮ ಅವರು ಇದಕ್ಕೆ ಪರ್ಯಾಯ ಉಪಾಯ ಹುಡುಕಿದರು.

ADVERTISEMENT

ಒಂದು ಟನ್ ಕಲ್ಲಂಗಡಿ ಹಣ್ಣಿಗೆ 60 ಕೆ.ಜಿ. ಬೆಲ್ಲ ಬಂದಿದೆ. ಇಂದಿನ ಬೆಲ್ಲದ ಮಾರುಕಟ್ಟೆ ಬೆಲೆಯಲ್ಲಿ ಸುಮಾರು ₹ 5 ಸಾವಿರ ದೊರೆಯುತ್ತದೆ. ಬೆಲ್ಲವೂ ಸಹ ಯಾವುದೇ ಅಡ್ಡ ವಾಸನೆ ಬರದೆ ಕಬ್ಬಿನ ಬೆಲ್ಲದಷ್ಟೇ ಉತ್ತಮವಾಗಿದೆ.

ಬೆಲ್ಲದ ತಯಾರಿಕೆ ಹೇಗೆ: ಕಲ್ಲಂಗಡಿ ಹಣ್ಣನ್ನು ಸಿಪ್ಪೆ ತೆಗೆದು ಜ್ಯೂಸ್ ಮಾಡುವ ಮಿಷನ್ ಅಥವಾ ಕೈಯಲ್ಲಿ ಜ್ಯೂಸ್ ತಯಾರಿಸಿಕೊಳ್ಳಬೇಕು. ಸಾಕಷ್ಟು ಬಾರಿ ಫಿಲ್ಟರ್ ಮಾಡಿಕೊಂಡು ಬೆಲ್ಲ ತಯಾರಿಸುವ ದೊಡ್ಡ ಕೊಪ್ಪರಿಗೆಗೆ ಹಾಕಬೇಕು. 4 ಗಂಟೆಗೂ ಹೆಚ್ಚು ಕಾಲ ಚೆನ್ನಾಗಿ ಕುದಿಸಬೇಕು. ನಂತರ ಅದರಲ್ಲಿನ ನೀರಿನ ಅಂಶ ಸಂಪೂರ್ಣ ಆವಿಯಾಗಿ ಪಾಕ ಮಾತ್ರ ಬರುತ್ತದೆ. ನಂತರ ಹದ ನೋಡಿ ಮತ್ತೊಂದು ಕೊಪ್ಪರಿಗೆ ಇಳಿಸಬೇಕು. ಸಿಹಿ ಸಿಹಿಯಾದ ಜೋನಿ ಬೆಲ್ಲ ತಯಾರಾಗಿರುತ್ತದೆ. ರುಚಿ, ಬಣ್ಣದಲ್ಲಿ ಕಬ್ಬಿನ ಬೆಲ್ಲಕ್ಕೂ ಕಲ್ಲಂಗಡಿ ಬೆಲ್ಲಕ್ಕೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.

ಜಯರಾಮ ಶೆಟ್ಟರು ತಾವು ಬೆಳೆದ ಕಲ್ಲಂಗಡಿ ಹಣ್ಣಿನಲ್ಲಿ ಸುಮಾರು 2 ಕ್ವಿಂಟಲ್ ಬೆಲ್ಲ ತಯಾರಿಸಿ ನಿಟ್ಟೂರಿನ ತಮ್ಮ ಹೋಟೆಲ್‌ನಲ್ಲಿ ಲಾಕ್‌ಡೌನ್ ಸಮಯ ಮಿತಿಯಲ್ಲಿ ಉಚಿತವಾಗಿ ಸವಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ರುಚಿ ಸವಿದವರು ‘ಬೇಷ್ ಶೆಟ್ಟರೆ’.. ಎಂದು ಗುಣಗಾನ ಮಾಡಿದ್ದಾರೆ.

***

ರೈತರ ಸಮಸ್ಯೆ ಕಡಿಮೆ ಆದರೆ ಶ್ರಮ ಸಾರ್ಥಕ

ಕೊಳ್ಳುವವರಿಲ್ಲದೆ ಬೆಳೆ ಹಾಳಾಗುವುದನ್ನು ನೋಡಲಾಗದೆ ಪರ್ಯಾಯ ಉಪಾಯ ಯೋಚಿಸಿದೆವು. ಬೆಲ್ಲ ತಯಾರಿಸುವ ಉಪಾಯ ಹೊಳೆದು ಪ್ರಯೋಗ ಮಾಡಿ ಯಶ ಸಾಧಿಸಿದ್ದೇವೆ. ಇದರಿಂದ ರೈತರ ಸಮಸ್ಯೆ ಸ್ವಲ್ಪವಾದರೂ ಕಡಿಮೆಯಾದರೆ ನಮ್ಮ ಶ್ರಮ ಸಾರ್ಥಕ.

ಸಂಪದಮನೆ ಜಯರಾಮ ಶೆಟ್ಟಿ, ಉದ್ಯಮಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.