
ಶಿಕಾರಿಪುರ: ‘ಈ ನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸ ಈಗ ಹೆಚ್ಚಾಗುತ್ತಿರುವುದು ಶ್ಲಾಘನೀಯ’ ಎಂದು ತೊಗರ್ಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಿರಂಜನ್ ಹೇಳಿದರು.
ತಾಲ್ಲೂಕಿನ ತೊಗರ್ಸಿ ಗ್ರಾಮದಲ್ಲಿ ಈಚೆಗೆ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೋ ಕಬ್ಬಡಿ ಆರಂಭಗೊಂಡ ನಂತರ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪಂದ್ಯಾವಳಿ ಆಯೋಜಿಸುವ ಪರಂಪರೆ ಹೆಚ್ಚಾಗಿದೆ. ವಾಲಿಬಾಲ್ ಕಬ್ಬಡಿ ಕ್ರೀಡೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದು ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಳ್ಳುವಂತಾಗಲಿ. ಕ್ರೀಡೆಯಲ್ಲಿ ಪಾಲ್ಗೊಂಡವರು ಸೋಲು– ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.
ಮಳೇಹಿರೇಮಠದ ಮಹಾಂತದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 20ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.
ಹೊಸಕೊಪ್ಪದ ಅಭಿಮನ್ಯು ಬಾಯ್ಸ್ ಪ್ರಥಮ ಸ್ಥಾನ (₹15,000), ಮಲ್ಲಿಕಾರ್ಜುನ ಬುಲ್ಸ್ ತೊಗರ್ಸಿ ದ್ವಿತೀಯ ಸ್ಥಾನ (₹7,500) ಹಾಗೂ ಹೊಸಕೆರೆ ಬಾಯ್ಸ್ ತೃತೀಯ ಸ್ಥಾನ ( ₹,3500) ಪಡೆದವು.
ಮುಖಂಡರಾದ ಸಣ್ಣಹನುಮಂತಪ್ಪ, ಪರಮೇಶ್ವರಪ್ಪ, ಚನ್ನವೀರಸ್ವಾಮಿ, ಬಸವಣ್ಯಯ್ಯ, ಮೋಹನ್‌ಗೌಡ್ರು, ಮಲ್ಲೇಶಪ್ಪ, ಆನಂದಯ್ಯ, ಸದಾನಂದ ಆಚಾರ್, ಶಿಕ್ಷಕ ಸಿದ್ಧಲಿಂಗಯ್ಯ, ಆಂಜನೇಯ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.