ADVERTISEMENT

ಇತಿಹಾಸ ಸೃಷ್ಟಿಸಿದ ಕಾಗೋಡು ಸತ್ಯಾಗ್ರಹ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ರೈತ ಸಮಾವೇಶ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 4:06 IST
Last Updated 15 ನವೆಂಬರ್ 2021, 4:06 IST
ಕಾಗೋಡು ಸತ್ಯಾಗ್ರಹದ ಸ್ಮರಣೆ ಅಂಗವಾಗಿ ಸಾಗರಕ್ಕೆ ಸಮೀಪದ ಕಾಗೋಡು ಗ್ರಾಮದಲ್ಲಿ ಸೊರಬದ ವಿಶ್ವಮಾನವ ಶಕ್ತಿ ಸತ್ಯಶೋಧಕ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ರೈತ ಸಮಾವೇಶವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು.
ಕಾಗೋಡು ಸತ್ಯಾಗ್ರಹದ ಸ್ಮರಣೆ ಅಂಗವಾಗಿ ಸಾಗರಕ್ಕೆ ಸಮೀಪದ ಕಾಗೋಡು ಗ್ರಾಮದಲ್ಲಿ ಸೊರಬದ ವಿಶ್ವಮಾನವ ಶಕ್ತಿ ಸತ್ಯಶೋಧಕ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ರೈತ ಸಮಾವೇಶವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು.   

ಸಾಗರ: ಸಾಮಾಜಿಕ ಬದಲಾವಣೆಗೆ ಕಾರಣವಾದ ಕಾಗೋಡು ಸತ್ಯಾಗ್ರಹ ಹೊಸ ಇತಿಹಾಸವನ್ನೇ ಸೃಷ್ಟಿಸಿತು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಇಲ್ಲಿಗೆ ಸಮೀಪದ ಕಾಗೋಡು ಗ್ರಾಮದಲ್ಲಿ ಸೊರಬದ ವಿಶ್ವಮಾನವ ಶಕ್ತಿ ಸತ್ಯಶೋಧಕ ಟ್ರಸ್ಟ್ ಕಾಗೋಡು ಸತ್ಯಾಗ್ರಹದ ಸ್ಮರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೇಣಿ ರೈತರಿಗೆ ಭೂಮಿಯ ಹಕ್ಕು ಕೊಡಿಸುವ ಜೊತೆಗೆ ಸಾಮಾಜಿಕ ಬದಲಾವಣೆಗೆ ದಾರಿ ತೋರಿದ ಶ್ರೇಯಸ್ಸು ಕಾಗೋಡು ಸತ್ಯಾಗ್ರಹಕ್ಕೆ ಸಲ್ಲುತ್ತದೆ. ಈ ಹೋರಾಟ ಕೇವಲ ಕಾಗೋಡು ಗ್ರಾಮಕ್ಕೆ ಸೀಮಿತವಾದುದಲ್ಲ. ಇಡೀ ಕರ್ನಾಟಕದ ಗೇಣಿ ರೈತರಿಗೆ ಹೋರಾಟದ ಪ್ರಯೋಜನ ಲಭಿಸಿದೆ ಎಂಬುದನ್ನು ಮರೆಯುವಂತಿಲ್ಲ ಎಂದರು.

ADVERTISEMENT

1951ರಲ್ಲಿ ಕಾಗೋಡು ಗ್ರಾಮದಲ್ಲಿ ಗೇಣಿ ಹಕ್ಕಿಗಾಗಿ ಆರಂಭವಾದ ಹೋರಾಟ 1974ರವರೆಗೂ ನಿರಂತರವಾಗಿ ನಡೆಯಿತು. ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ ಮೊದಲಾದ ಸಮಾಜವಾದಿಗಳ ಪ್ರವೇಶದಿಂದಾಗಿ ಈ ಹೋರಾಟಕ್ಕೆ ತಾತ್ವಿಕ ನೆಲೆಗಟ್ಟು ಸಿಗುವ ಜೊತೆಗೆ ರಾಷ್ಟ್ರವ್ಯಾಪಿ ಮನ್ನಣೆ ದೊರಕುವಂತಾಯಿತು ಎಂದು ಅವರು ಸ್ಮರಿಸಿದರು.

‘1972ರಲ್ಲಿ ಮೊದಲ ಬಾರಿಗೆ ನಾನು ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದ್ದರಿಂದ ಭೂ ಸುಧಾರಣೆ ಕಾಯ್ದೆಯ ಪರ ಧ್ವನಿ ಎತ್ತಲು ಸಾಧ್ಯವಾಯಿತು. ಗೇಣಿದಾರರ ಭೂಮಿಯ ಸ್ವಾಧೀನ ಆಧರಿಸಿ ಅವರಿಗೆ ಭೂಮಿಯ ಹಕ್ಕು ಕೊಟ್ಟಿದ್ದು
ದೇಶದ ಇತಿಹಾಸದಲ್ಲಿ ಇದೇ ಮೊದಲು’ ಎಂದು ಅವರು ಹೇಳಿದರು.

ಭೂ ಮಾಲೀಕರು ಗೇಣಿದಾರರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಹಲವು ರೀತಿಯಲ್ಲಿ ಗೇಣಿ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿತ್ತು. ಆದಾಗ್ಯೂ ಲೋಹಿಯಾ ಅವರಿಗೆ ಕೊಟ್ಟ ಮಾತಿನಂತೆ ಗಣಪತಿಯಪ್ಪ ಮತ್ತು ರೈತ ಸಂಘದ ಇತರ ಮುಖಂಡರು ಚಳವಳಿಯನ್ನು ಅಹಿಂಸಾತ್ಮಕ ರೂಪದಲ್ಲೇ ನಡೆಸಿಕೊಂಡು ಹೋಗಿದ್ದು ಗಮನಾರ್ಹ ಸಂಗತಿ ಎಂದು ಅವರು ವಿವರಿಸಿದರು.

ಈಗಿನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಕಾಯ್ದೆಗಳನ್ನು ಬಹುಮತದ ಬಲದ ಮೇಲೆ ಜಾರಿಗೆ ತರುತ್ತಿವೆ. ಹೋರಾಟದ ಮೂಲಕವೇ ಇವುಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವ ಅಗತ್ಯವಿದೆ. ಕಾಗೋಡು ಸತ್ಯಾಗ್ರಹದ ಫಲಾನುಭವಿಗಳಾಗಿರುವ ಕುಟುಂಬದ ಯುವಕರು ಈ ಹಿಂದೆ ನಡೆದ ಹೋರಾಟದ ಮಹತ್ವ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ವಿಶ್ವಮಾನವ ಶಕ್ತಿ ಸತ್ಯ ಶೋಧಕ ಟ್ರಸ್ಟ್‌ನ ಆರ್.ಬಿ. ಚಂದ್ರಪ್ಪ, ‘ಸುಗ್ರೀವಾಜ್ಞೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾಗೋಡು ಸತ್ಯಾಗ್ರಹದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿವೆ. ಕೃಷಿಭೂಮಿ ಮಾರಾಟಕ್ಕೆ ಪ್ರೇರಣೆ ನೀಡುವ ಗೋಮುಖವ್ಯಾಘ್ರ ಸ್ವರೂಪಿ ರಾಜಕಾರಣವನ್ನು ತಡೆಯಲು ಹೊಸ ಚಳವಳಿಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ, ‘ಕಡು ಬಡತನದಲ್ಲಿದ್ದ ಗೇಣಿ ರೈತರಿಗೆ ಭೂಮಿಯ ಹಕ್ಕು ದೊರಕಿದ್ದು ನಿಜವಾದ ಸ್ವಾತಂತ್ರ್ಯ ದೊರೆತ ಹಾಗೆ. ಇದಕ್ಕೆ ಕಾರಣರಾದ ಸತ್ಯಾಗ್ರಹಿಗಳ ಕುಟುಂಬದವರನ್ನು ನಾವು ಗುರುತಿಸದಿದ್ದರೆ ಕೃತಘ್ನರಾಗುತ್ತೇವೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ, ಕಾಗೋಡು ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಸತ್ಯಾಗ್ರಹಿಗಳ ಕುಟುಂಬದ ಪ್ರಮುಖರನ್ನು ಸನ್ಮಾನಿಸಲಾಯಿತು. ಕಾಗೋಡು ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಪರಶುರಾಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಚಿಂತಕ ರಾಜಪ್ಪ ಮಾಸ್ತರ್, ಪ್ರಮುಖರಾದ ಅಕ್ಕಮಹಾದೇವಿ, ಮಂಡಗಳಲೆ ಹುಚ್ಚಪ್ಪ, ಹೊಳಿಯಪ್ಪ, ವೀರಭದ್ರ ನಾಯ್ಕ್, ಸುಶೀಲಮ್ಮ, ರಾಯನ ಕೆರಿಯಪ್ಪ, ಸಾವಿತ್ರಮ್ಮ, ರಾಘವೇಂದ್ರ ನಾಯ್ಕ್, ಕೆರಿಯಪ್ಪ, ಸುರೇಶ್ ನಾಯ್ಕ್, ಮಂಜಪ್ಪ ಹಿರೇನೆಲ್ಲೂರು, ಚಂದ್ರಪ್ಪ, ರೇಣುಕಮ್ಮ, ಯೋಗೀಶಪ್ಪ, ಮಂಜುನಾಥ ಬಳಸಗೋಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.