ADVERTISEMENT

ಸ್ತ್ರೀ ತಲ್ಲಣಕ್ಕೆ ಧ್ವನಿಯಾಗಿದ್ದ ಬೇಂದ್ರೆ ಕಾವ್ಯ

‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ಬೇಂದ್ರೆ ಕಾವ್ಯದ ಕುರಿತು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 7:14 IST
Last Updated 8 ನವೆಂಬರ್ 2022, 7:14 IST
ಸಾಗರಕ್ಕೆ ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಸೋಮವಾರ ಏರ್ಪಡಿಸಿದ್ದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಅವರ ಕಾವ್ಯದ ಕುರಿತು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿದರು.
ಸಾಗರಕ್ಕೆ ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಸೋಮವಾರ ಏರ್ಪಡಿಸಿದ್ದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಅವರ ಕಾವ್ಯದ ಕುರಿತು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿದರು.   

ಸಾಗರ: ‘1918–20ರ ಹೊತ್ತಿಗೇನೆ ಸ್ತ್ರೀ ಜಗತ್ತಿನ ತಲ್ಲಣಗಳನ್ನು ಬೇಂದ್ರೆ ತಮ್ಮ ಕಾವ್ಯದಲ್ಲಿ ಧ್ವನಿಸಿದ್ದಾರೆ. ಆಧುನಿಕತೆ ಹೆಸರಿನಲ್ಲಿ ವಿಭಜಿಸಲಾದ ಭಾವಲೋಕ ಹಾಗೂ ಕತ್ತರಿಸಲಾದ ಅನುಭವ ಲೋಕಕ್ಕೆ ಪ್ರತಿರೋಧ ಎನ್ನುವಂತೆ ಅವರು ತಮ್ಮ ಕಾವ್ಯದಲ್ಲಿ ಅನುಭವಗಳನ್ನು ದಾಟಿಸಿದ್ದಾರೆ’ ಎಂದು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಸೋಮವಾರ ಏರ್ಪಡಿಸಿದ್ದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಅವರ ಕಾವ್ಯದ ಕುರಿತು ಅವರು ಮಾತನಾಡಿದರು.

‘ಒಂದು ಅನುಭವದಿಂದ ಮತ್ತೊಂದು ಅನುಭವಕ್ಕೆ ನಮ್ಮನ್ನು ಕ್ಷಣಾರ್ಧದಲ್ಲಿ ದಾಟಿಸುವ ಮೂಲಕ ಲೌಕಿಕ, ಅಲೌಕಿಕಗಳೆಂಬ ವಿಂಗಡಣೆಗಳನ್ನು ತೊಡೆದು ಹಾಕಿ ಅವುಗಳು ಯಾವುದು ಎಂದು ಗುರುತಿಸಲಾಗದ ಮಾದರಿಯಲ್ಲಿ ರೂಪಕಗಳನ್ನು ಚಿತ್ರಿಸಿರುವುದು ಬೇಂದ್ರೆ ಕಾವ್ಯದ ವೈಶಿಷ್ಟ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ಬೇಂದ್ರೆ ಅವರ ‘ಸಣ್ಣ ಸೋಮವಾರ’ ಕವಿತೆಯಲ್ಲಿ ಬರುವ ‘ಭಾವ ಇದ್ಹಾಂಗ ದೇವ’ ಎಂಬ ಸಾಲಿನಲ್ಲಿ ಅಪ್ಪಟ ಆಧುನಿಕನ ದೃಷ್ಟಿಕೋನವಿದೆ. ಒಂದೇ ಕವಿತೆಯಲ್ಲಿ ಲೌಕಿಕತೆ, ಅಲೌಕಿಕತೆ ನಮ್ಮ ಮೇಲೆ ಬಂದು ಎರಗುತ್ತದೆ. ಕವಿತೆಯನ್ನು ಹೀಗೆಯೇ ಅರ್ಥೈಸಿಕೊಳ್ಳಬೇಕು ಎಂಬ ನಿರ್ದೇಶನವನ್ನು ಬೇಂದ್ರೆ ತಮ್ಮ ಕವಿತೆಗಳಲ್ಲಿ ನೀಡಿಲ್ಲ’ ಎಂದು ಅವರು ವಿವರಿಸಿದರು.

‘ಮೇಲ್ನೋಟಕ್ಕೆ ಬೇಂದ್ರೆ ಅವರ ಕವಿತೆಗಳಲ್ಲಿ ಲಯ, ನಾದವೇ ಪ್ರಧಾನ ಎನ್ನುವಂತೆ ಕೇಳಿ ಕವಿಗೆ ಇಂಪು ಕೊಡುತ್ತದೆ. ಆದರೆ, ಅವರು ಕವಿತೆಗಳ ಮೂಲಕ ಲೋಕವನ್ನು ಅರ್ಥ ಮಾಡಿಕೊಳ್ಳುವ ಗ್ರಹಿಕೆಯನ್ನು ಕೂಡ ಕೊಟ್ಟಿದ್ದಾರೆ. ಹೀಗಾಗಿ ಅದೆಷ್ಟು ಸಾಂಸ್ಕೃತಿಕ ನೆನಪುಗಳನ್ನು ಬೇಂದ್ರೆ ಕಾವ್ಯ ಹೊತ್ತುಕೊಂಡು ಬಂದಿವೆ ಎಂಬ ಅರಿವು ಅವರ ಕಾವ್ಯದ ಓದಿನ ಹೊತ್ತಿಗೆ ನಮಗೆ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ಕನ್ನಡ ನಾಡು ಎಂದರೆ ಇಲ್ಲಿ ಹಲವು ಕನ್ನಡ ಜಗತ್ತುಗಳು ಇವೆ. ನಾಡಿನ ಹಲವು ಜೀವನ ಪದ್ಧತಿ, ನಂಬಿಕೆ, ಬದುಕಿನ ಕ್ರಮ ಎಲ್ಲವನ್ನೂ ಮಾಧ್ಯಮವನ್ನಾಗಿ ಮಾಡಿಕೊಂಡು ಅವುಗಳನ್ನು ಕಾವ್ಯದಲ್ಲಿ ತಂದಿರುವುದು ಬೇಂದ್ರೆ ಅವರ ಹೆಗ್ಗಳಿಕೆಯಾಗಿದೆ. ಹೀಗಾಗಿ ಅವರ ಕಾವ್ಯದಲ್ಲಿ ಹಲವು ಕನ್ನಡ ಲೋಕ ಪ್ರತ್ಯಕ್ಷವಾಗಿರುವ ವೈವಿಧ್ಯವನ್ನು ಗುರುತಿಸಬಹುದು’ ಎಂದರು.

ಕಾವ್ಯ ಕಾಲವನ್ನು ಮೀರುವಂತಹದ್ದು ಎಂಬ ವಿಶ್ಲೇಷಣೆ ಇದೆ. ಆದರೆ, ಅದು ಕಾಲಬದ್ಧವೂ ಹೌದು. ಕಾವ್ಯದ ಮೂಲಕ ಸಂಸ್ಕೃತಿ ತನ್ನನ್ನು ತಾನು ಪುನರ್ ಸೃಷ್ಟಿ ಮಾಡಿಕೊಳ್ಳುತ್ತ ಹೋಗುತ್ತದೆ. ಬೇಂದ್ರೆ ಇಂತಹ ಪುನರ್ ಸೃಷ್ಟಿಯ ಪ್ರಕ್ರಿಯೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಕವಿಯಾಗಿದ್ದಾರೆ. ಅವರ ಕಾವ್ಯದಲ್ಲಿ ಕನ್ನಡ ಬದುಕಿನ ಸಾಂಸ್ಕೃತಿಕ ನೆನಪು ಒಂದು ಝರಿಯಂತೆ ಸಶರೀರವಾಗಿ ಪ್ರತ್ಯಕ್ಷವಾಗಿದೆ ಎಂದರು.

ಸಂವಾದ ನಡೆಯಿತು. ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ಬಳಗದವರು ‘ಕೋರಿಯೋಲೇನಸ್’ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.