ADVERTISEMENT

ಭಕ್ತಿಯಿಂದ ಸಮಾನತೆ ಸಾರಿದ ದಾರ್ಶನಿಕ ಕನಕದಾಸ: ಶಾಸಕ ಎಸ್.ಎನ್.ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 5:54 IST
Last Updated 9 ನವೆಂಬರ್ 2025, 5:54 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ನಡೆದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕನಕದಾಸರ ರೂಪಕದ ನೋಟ  
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ನಡೆದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕನಕದಾಸರ ರೂಪಕದ ನೋಟ     

ಶಿವಮೊಗ್ಗ: ಕನಕದಾಸರು ಪ್ರಪಂಚ ಕಂಡ ಶ್ರೇಷ್ಠ ದಾರ್ಶನಿಕ. ಭಗವಂತನನನ್ನು ಸಾಕ್ಷಾತ್ಕರಿಸಿಕೊಂಡವರು. ಭಕ್ತಿಯ‌ ಮೂಲಕ ಸಮಾನತೆ ಸಾರಿದವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ‌ ಸ್ಮರಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಕುರುಬರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಕ್ತಿಯ ಸಾಕಾರಮೂರ್ತಿ ಕನಕರು‌ ಉಡುಪಿ ಶ್ರೀ ಕೃಷ್ಣರನ್ನು ಒಲಿಸಿಕೊಂಡ ಬಗೆಯನ್ನು ಸ್ಮರಿಸುವ ನಮ್ಮ ಸಮಾಜ, ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ‌ ಮಾಡಿದರೆ ಹೆಚ್ಚು ಪುಣ್ಯ ಲಭಿಸುತ್ತದೆ ಎಂದು ನಂಬಿದೆ ಎಂದರು.

ADVERTISEMENT

ಕನಕರ 316 ಕೀರ್ತನೆಗಳನ್ನು ಸಂಗ್ರಹಿಸಿ‌ ಪುಸ್ತಕ ಮಾಡಿ ತಲುಪಿಸುವ ಕೆಲಸ ಆಗಬೇಕು. ತಾವೂ ಸಹ ಈ ಕಾರ್ಯಕ್ಕೆ ಸಹಕರಿಸುವುದಾಗಿ ತಿಳಿಸಿದ ಅವರು‌ ಮುಂದಿನ‌ ವರ್ಷದ ಜಯಂತಿಯಲ್ಲಿ  ಎಲ್ಲರಿಗೂ ಈ ಪುಸ್ತಕ ಸಿಗುವಂತಾಗಬೇಕೆಂದು ಸಲಹೆ ನೀಡಿದರು.

ನಿವೃತ್ತ ಉಪನ್ಯಾಸಕ ಕೆ.ಎನ್.ರೇವಣ್ಣ ಮಾತನಾಡಿ, ಕನಕದಾಸ ಎಂದರೆ ಮಹಾನ್ ಕವಿ, ಸಂತ, ಕಲಿ, ಕೀರ್ತನಕಾರ, ಭಕ್ತ ಹಲವಾರು ಪ್ರತಿಭೆ ಒಳಗೊಂಡ ಮಹಾನ್ ಪುರುಷ. ಕನಕ ಕೇವಲ ಕುರುಬ ಜಾತಿಗೆ ಸೀಮಿತ ಅಲ್ಲ. ಅವರು ಅಂಬೇಡ್ಕರ್, ಬುದ್ದ, ಬಸವನಂತಹ ವ್ಯಕ್ತಿ. ಅವರು ಸಮಾಜದ ಓರೆಕೋರೆ, ಅಂಕುಡೊಂಕು, ತಾರತಮ್ಯಗಳನ್ನು ಕೇವಲ ತಮ್ಮ ಕೀರ್ತನೆಗಳು ಮಾತ್ರವಲ್ಲ ಭಕ್ತಿಯ ಮೂಲಕ ಹೋಗಲಾಡಿಸಲು ಹೋರಾಡಿದರು ಎಂದು ಸ್ಮರಿಸಿದರು.
 
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನ‌ಕುಮಾರ್ ಮಾತನಾಡಿ, ಸಮಾಜ‌ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದು ಮುಖ್ಯ. ಕನಕರ ತತ್ವಾದರ್ಶಗಳನ್ನು ಜೀವನದಲ್ಲಿ‌ ಅಳವಡಿಸಿಕೊಳ್ಳಬೇಕು ಎಂದರು.

ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಶಿವಮೊಗ್ಗ ತಹಶೀಲ್ದಾರ್ ವಿ.ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಜರಿದ್ದರು.

ಕನಕದಾಸರು ಮೇಲು ಕೀಳು ಜಾತೀಯತೆ ಹೋಗಲಾಡಿಸಿ ಸಮಾನತೆ ತರಲು ಸಾಹಿತ್ಯ ಸಂಗೀತ ಕೀರ್ತನೆಗಳ ಮೂಲಕ ಕೊಡುಗೆ ನೀಡಿದ್ದಾರೆ. ಅವರ ಆಶಯಗಳನ್ನು ಜನರಿಗೆ ತಿಳಿಸಲು ಸರ್ಕಾರ ಜಯಂತಿ ಆಚರಿಸುತ್ತಿದೆ.
ಎಚ್.ಎಸ್.ಸುಂದರೇಶ ಸೂಡಾ, ಅಧ್ಯಕ್ಷ
ಕನಕರು ಸಮಾಜದಲ್ಲಿನ ಜಾತಿ- ಮತಗಳ ಭೇದದ ಪಿಡುಗು ದೂರ ಮಾಡಲು ಎಲ್ಲರೂ ಸಮಾನರು ಎಂಬುದನ್ನು ತಮ್ಮ ಕೀರ್ತನೆಗಳ‌ ಮೂಲಕ ಸಾರಿದ್ದಾರೆ. ಯುವಜನರು ಅವರ ಆಶಯಗಳನ್ನು ಹೆಚ್ಚೆಚ್ಚು ತಿಳಿಯಬೇಕು
ಜಿ.ಪಲ್ಲವಿ, ರಾಜ್ಯ ಪರಿಶಿಷ್ಟ ಜಾತಿ ಹಾಗೂ ವರ್ಗದ ಅಲೆಮಾರಿ ನಿಗಮದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.