ಸಾಗರ: ‘ನಿರ್ಲಕ್ಷ್ಯಕ್ಕೆ ಒಳಗಾದ ಲೋಕದೃಷ್ಟಿಗಳ ಕಡೆಗೆ ಜನರ ಗಮನ ಸೆಳೆಯುವಂತೆ ಮಾಡಿರುವುದು ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳ ವೈಶಿಷ್ಟ್ಯತೆಯಾಗಿದೆ’ ಎಂದು ಲೇಖಕಿ ಸಬಿತಾ ಬನ್ನಾಡಿ ಹೇಳಿದರು.
ಇಲ್ಲಿನ ವರದಶ್ರೀ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆ ಪದವಿಪೂರ್ವ ಕಾಲೇಜುಗಳ ಕನ್ನಡ ಅಧ್ಯಾಪಕರ ವೇದಿಕೆ (ಕಾಜಾಣ) ಮಂಗಳವಾರ ಏರ್ಪಡಿಸಿದ್ದ ಕನ್ನಡ ಭಾಷಾ ಪುನಶ್ಚೇತನ ಕಾರ್ಯಾಗಾರದಲ್ಲಿ ತೇಜಸ್ವಿ ಅವರ ‘ಕೃಷ್ಣೇಗೌಡನ ಆನೆ’, ಚಂದ್ರಶೇಖರ ಕಂಬಾರರ ‘ಬೆಪ್ಪುತಕ್ಕಡಿ ಬೋಳೆಶಂಕರ’ ಕೃತಿಗಳ ಕುರಿತು ಮಾತನಾಡಿದರು.
‘ಕಾಡಿನ ಕಡೆ ನೋಡುವ ಮೂಲಕ ನಾಡಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕ್ರಿಯೆ ತೇಜಸ್ವಿ ಕೃತಿಗಳಲ್ಲಿ ನಿರಂತರವಾಗಿ ನಡೆದಿದೆ. ಮೇಲ್ನೋಟಕ್ಕೆ ಅವರ ಬರಹಗಳಲ್ಲಿ ಸ್ತ್ರೀ ಪಾತ್ರಗಳಿಗೆ ಮಹತ್ವ ಕಡಿಮೆ ಅನಿಸಿದರೂ ಹೆಣ್ಣಿನಿಂದ ತಮ್ಮ ಬರಹಗಳಿಗೆ ಒಂದು ತತ್ವವನ್ನೇ ಅವರು ಪಡೆದಿದ್ದಾರೆ’ ಎಂಬುದನ್ನು ಅವರು ಉದಾಹರಿಸಿದರು.
‘ಕ್ಷುದ್ರತೆಯಲ್ಲಿ ಮನುಷ್ಯ ಮುಳುಗಿದ ಪರಿಣಾಮ ಅನುಮಾನ, ಅಭದ್ರತೆಯಂತಹ ಹಲವು ಸಿಕ್ಕುಗಳಿಗೆ ಸಿಲುಕುವ ವಿದ್ಯಮಾನಗಳಿಗೆ ಕೃಷ್ಣೇಗೌಡರ ಆನೆ ಕೃತಿ ಕನ್ನಡ ಹಿಡಿದಿದೆ. ನಮ್ಮ ತಪ್ಪುಗಳನ್ನು ನಾವು ಬೇರೆಯವರ ಮೇಲೆ ಹೊರಿಸುವ ಪ್ರವೃತ್ತಿಯ ಬಗ್ಗೆಯೂ ಈ ಕೃತಿ ಬೆಳಕು ಚೆಲ್ಲುತ್ತದೆ’ ಎಂದು ವಿವರಿಸಿದರು.
‘ಕುವೆಂಪು ಅವರ ಮಾರ್ಗಗಳನ್ನು ತಿರಸ್ಕರಿಸದೇ ತಮ್ಮದೆ ಆದ ಭಿನ್ನ ಮಾರ್ಗಗಳನ್ನು ಬರವಣಿಗೆಯಲ್ಲಿ ತೇಜಸ್ವಿ ಶೋಧಿಸಿದ್ದಾರೆ. ವಿಜ್ಞಾನಕ್ಕೆ ಸಂಬಂಧಪಡದ ವ್ಯಕ್ತಿ ಮತ್ತು ವಸ್ತುಗಳ ಮೂಲಕ ವೈಜ್ಞಾನಿಕ ಬಿಕ್ಕಟ್ಟುಗಳನ್ನು ನಿರ್ವಹಿಸುವ ದಾರಿಯನ್ನು ಅವರು ನಮಗೆ ತೋರಿಸುತ್ತಾರೆ’ ಎಂದು ವಿಶ್ಲೇಷಿಸಿದರು.
ಜಗತ್ತಿನ ನೆಲೆಯಿಂದ ನಿಂತ ನೆಲವನ್ನು ನೋಡದೆ ನಿಂತ ನೆಲೆಯಿಂದಲೇ ಜಗತ್ತನ್ನು ನೋಡುವ ದೃಷ್ಟಿಕೋನ ಚಂದ್ರಶೇಖರ ಕಂಬಾರರ ಬರಹಗಳ ಹಿಂದಿದೆ. ಮನುಷ್ಯನ ಮೂಲ ಪ್ರವೃತ್ತಿಗಳನ್ನು ಶೋಧಿಸುತ್ತಲೇ ‘ಫಲವಂತಿಕೆ’ಯ ಹುಡುಕಾಟವನ್ನು ಕಂಬಾರರು ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಅಂತರಂಗದ ಬೆಳಕು ಎಂದರೆ ಅದು ಕೇವಲ ವ್ಯಕ್ತಿಗತವಾದದ್ದಲ್ಲ. ಬದಲಾಗಿ ಸಮುದಾಯಕ್ಕೆ ಸಂಬಂಧಿಸಿದ್ದು ಎಂಬ ವಿವೇಕವನ್ನು ಕಂಬಾರರ ಬರವಣಿಗೆ ಒಳಗೊಂಡಿದೆ. ಕೇಡು ಅತಿರೇಕ ತಲುಪಿದಾಗ ಅದು ಹೇಗೆ ವಿನಾಶದತ್ತ ನಮ್ಮನ್ನು ಕೊಂಡೊಯ್ಯುತ್ತದೆ ಎಂಬ ಎಚ್ಚರವನ್ನು ಕಂಬಾರರ ಕೃತಿಗಳು ಕೊಟ್ಟಿವೆ ಎಂದು ವಿಶ್ಲೇಷಿಸಿದರು.
‘ಗದ್ಯ ಸಾಹಿತ್ಯ’ದ ಕುರಿತು ಮಾತನಾಡಿದ ತೀರ್ಥಹಳ್ಳಿಯ ತುಂಗಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ, ಉಪನ್ಯಾಸಕರಿಗೆ ಬಹುಮುಖಿ ಓದು ಇದ್ದಾಗ ಮಾತ್ರ ಗದ್ಯ ಸಾಹಿತ್ಯದಲ್ಲಿನ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮುಟ್ಟಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
‘ಪದ್ಯ ಸಾಹಿತ್ಯ’ ದ ಕುರಿತು ಮಾತನಾಡಿದ ಲೇಖಕ ಜಿ.ಎಸ್.ಭಟ್, ಭಾಷೆಯ ವಿಷಯ ಕಲಿಸುವ ಉಪನ್ಯಾಸಕರು ಭಾಷಾ ಬೆಳವಣಿಗೆಯ ವಿವಿಧ ಹಂತಗಳನ್ನು ಅಧ್ಯಯನ ಮಾಡುವ ಜೊತೆಗೆ ಭಾಷೆಯ ಪ್ರಾದೇಶಿಕ ವಿಶೇಷತೆಗಳನ್ನು ಗ್ರಹಿಸಬೇಕಾಗುತ್ತದೆ. ಪದ್ಯಗಳ ಹಿಂದೆ ಅಡಗಿರುವ ‘ಧ್ವನಿ’ಯನ್ನು ವಿದ್ಯಾರ್ಥಿಗಳಿಗೆ ದಾಟಿಸುವುದು ಮುಖ್ಯವಾದ ಕೆಲಸ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ ಗುಂಡುಪಲ್ಲಿ ಕಾರ್ಯಾಗಾರ ಉದ್ಘಾಟಿಸಿದರು. ಪ್ರಮುಖರಾದ ಸತ್ಯನಾರಾಯಣ ಕೆ.ಸಿ. ವಿ.ಸಿ.ಪಾಟೀಲ್, ಸತೀಶ್ ಸಾಸ್ವೆಹಳ್ಳಿ, ನಾಗೇಶ್ ಬಿದರಗೋಡು ಇದ್ದರು.
ಸಾನ್ವಿ ಜಿ.ಭಟ್ ಪ್ರಾರ್ಥಿಸಿದರು. ವಿಶ್ವನಾಥ ಸ್ವಾಗತಿಸಿದರು. ಸರ್ಫ್ರಾಜ್ ಚಂದ್ರಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಂದಿಸಿದರು. ಎಲ್.ಎಂ.ಹೆಗಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.