ADVERTISEMENT

Kannada Rajyotsava Award: ಹಸೆಚಿತ್ತಾರ ಕಲಾವಿದನ ಮುಡಿಗೆ ‘ರಾಜ್ಯೋತ್ಸವ’ ಗರಿ

ಎಂ.ರಾಘವೇಂದ್ರ
Published 31 ಅಕ್ಟೋಬರ್ 2024, 7:20 IST
Last Updated 31 ಅಕ್ಟೋಬರ್ 2024, 7:20 IST
<div class="paragraphs"><p>ಸಿರಿವಂತೆ ಚಂದ್ರಶೇಖರ್</p></div>

ಸಿರಿವಂತೆ ಚಂದ್ರಶೇಖರ್

   

ಸಾಗರ: ಎರಡೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಮಲೆನಾಡಿನ ಅಪ್ಪಟ ಜಾನಪದ ಕಲೆಯಾಗಿರುವ ಹಸೆ ಚಿತ್ತಾರ ಕಲೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ತಾಲ್ಲೂಕಿನ ಸಿರಿವಂತೆ ಗ್ರಾಮದ ಚಂದ್ರಶೇಖರ್ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಅನಕ್ಷರಸ್ಥರಾದರೂ ನೆಲದ ಸತ್ವದ ಜಾನಪದ ಪರಂಪರೆಯನ್ನೇ ವಿದ್ಯೆಯನ್ನಾಗಿಸಿಕೊಂಡಿರುವ ‘ಮಲೆನಾಡಿನ ಅಜ್ಜಿಯಂದಿರು’ ಜೀವಂತವಾಗಿಟ್ಟಿರುವ ಕಲೆಗಳ ಪೈಕಿ ಹಸೆ ಚಿತ್ತಾರ ಸಹ ಒಂದು. ಇಂತಹ ಕಲೆಯನ್ನು ಕರಗತ ಮಾಡಿಕೊಂಡು ದೇಶ– ವಿದೇಶಗಳಿಗೆ ಪರಿಚಯಿಸಿದ ಹೆಗ್ಗಳಿಕೆ ಸಿರಿವಂತೆ ಚಂದ್ರಶೇಖರ್ ಅವರದ್ದು.

ADVERTISEMENT

‘ನಶಿಸಿ ಹೋಗುತ್ತಿರುವ ಹಸೆ ಚಿತ್ತಾರದಂತಹ ಕಲೆಯನ್ನು ನಾವೇ ಪುನರುಜ್ಜೀವನಗೊಳಿಸಬೇಕು ಎಂಬ ಕಾರಣಕ್ಕೆ ಹಸೆ ಚಿತ್ರದ ಅಭ್ಯಾಸ, ಅಧ್ಯಯನದಲ್ಲಿ ತೊಡಗಿದೆ. ಅದರಲ್ಲಿನ ಸಾಂಪ್ರದಾಯಿಕ ಅಂಶಗಳಿಗೆ ಒತ್ತು ನೀಡಿದ್ದು ನನ್ನ ಕಲಿಕೆಯ ಮಹತ್ವ ಹೆಚ್ಚಿಸಿತು’ ಎಂದು ಅವರು ಹೇಳುತ್ತಾರೆ.

‘ಹಸೆ ಚಿತ್ರಗಳಲ್ಲಿನ ಒಳ ವಿವರಗಳ ಅಧ್ಯಯನ ಮಾಡುತ್ತ ಹೋದಂತೆ ಅದರಲ್ಲಿನ ‘ಎಳೆ’, ‘ನಿಲಿ’, ‘ನಿಲಿಕೊಚ್ಚು’, ‘ಬಾಸಿಂಗ ನಿಲಿ’, ‘ಪೊಪ್ಳಿ’ ಮೊದಲಾದ ಸಂಗತಿಗಳಲ್ಲಿ ಜೀವನದ ಸಮಗ್ರ ಅಂಶಗಳು ಸಾಂಕೇತಿಕವಾಗಿ ಹೇಗೆ ವ್ಯಕ್ತವಾಗಿದೆ ಎಂಬುದು ಅರ್ಥವಾಗುತ್ತ ಹೋಯಿತು’ ಎಂದು ಅವರು ವಿವರಿಸುತ್ತಾರೆ.

ಮನುಷ್ಯ ಸಂಬಂಧಗಳ ಅರ್ಥಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಜಾನಪದ ಕಲಾವಿದರು ಹಸೆ ಚಿತ್ತಾರದ ಮೂಲಕ ನಡೆಸಿದ್ದಾರೆ. ಅರ್ಧನಾರೀಶ್ವರ, ಸ್ಮಶಾನವಾಸಿ ಶಿವನ ಕಲ್ಪನೆಯ ಮೂಲಕ ಬದುಕು ಅರಳುವ ಕ್ರಿಯೆ, ಜೀವನದ ಏಳುಬೀಳುಗಳ ಚಿತ್ರಣ ಸೂಚ್ಯವಾಗಿ ಹಸೆ ಚಿತ್ರಗಳಲ್ಲಿ ವ್ಯಕ್ತವಾಗಿದೆ. ‘ನೀರಿಗೂ ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧವನ್ನು ಈ ಕಲೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಹೀಗೆ ಸರಳ ರೇಖೆಗಳ ಮೂಲಕ ಮಹತ್ವದ ಸಂಗತಿಗಳನ್ನು ಅರ್ಥೈಸಿರುವ ನಮ್ಮ ಪಾರಂಪರಿಕ ಅಜ್ಜಿಯಂದಿರ ಜಾನಪದ ಪ್ರತಿಭೆಗೆ ಹಸೆ ಚಿತ್ತಾರ ಕಲೆ ಸಾಕ್ಷಿಯಾಗಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

ಕರ್ನಾಟಕದ ಹಲವು ಭಾಗಗಳಲ್ಲಿ, ಕೋಲ್ಕತ್ತಾ, ಹೈದರಾಬಾದ್, ಮಧುರೆಗಳಲ್ಲಿ ಚಂದ್ರಶೇಖರ್ ಅವರ ಹಸೆ ಚಿತ್ತಾರ ಕಲೆ ಪ್ರದರ್ಶನಗೊಂಡಿರುವ ಜೊತೆಗೆ ಜಪಾನ್, ದುಬೈಗೂ ಕಲೆಯನ್ನು ಕೊಂಡೊಯ್ದಿರುವ ಇವರು, ತಮ್ಮ ‘ಚಿತ್ರಸಿರಿ’ ಸಂಸ್ಥೆಯ ಮೂಲಕ ಆಸಕ್ತ ಯುವಕ, ಯುವತಿಯರಿಗೆ ತರಬೇತಿ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಭತ್ತದ ತೆನೆಯಿಂದಲೇ ನಿರ್ಮಿಸುವ ತೋರಣ ಚಂದ್ರಶೇಖರ್ ಅವರ ಜಾನಪದ ಕಲಾ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ಚಿತ್ರಸಿರಿ ಸಂಸ್ಥೆಯು ಭತ್ತದ ತೆನೆ ತೆಗೆಯುವ ಕೆಲಸಕ್ಕೆ ನೇಮಿಸಿಕೊಳ್ಳುವ ಮೂಲಕ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯದಲ್ಲೂ ತೊಡಗಿದೆ.

ಸಿರಿವಂತೆ ಗ್ರಾಮದಲ್ಲಿ ‘ಕಣ್ಣು ತೆರೆಯುವ ಬುದ್ದನ ವಿಗ್ರಹ’ ಪ್ರತಿಷ್ಠಾಪಿಸಿರುವ ಚಂದ್ರಶೇಖರ್, ಈ ಮೂಲಕ ದೇಹದಾನ, ನೇತ್ರದಾನದ ಮಹತ್ವದ ಅರಿವು ಮೂಡಿಸಲು ಮುಂದಾಗಿದ್ದಾರೆ. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿದೆ.

ಪ್ರಶಸ್ತಿಗೆ ನಾನು ಅರ್ಜಿ ಸಲ್ಲಿಸಿರಲಿಲ್ಲ. ನನಗೆ ಬಂದಿರುವ ಪ್ರಶಸ್ತಿಯು ಸಾಂಸ್ಕೃತಿಕವಾಗಿ ವಿದ್ಯಾವಂತರಾಗಿರುವ ಜಾನಪದ ಅಜ್ಜಿಯಂದಿರಿಗೆ ಸಲ್ಲುತ್ತದೆ
ಸಿರಿವಂತೆ ಚಂದ್ರಶೇಖರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.