ADVERTISEMENT

ವಿವಾದ ಹುಟ್ಟುಹಾಕಿದ ಸಾಹಿತ್ಯ ಪರಿಷತ್ ಆದೇಶ

ಕಸಾಪ ಜಿಲ್ಲಾ, ತಾಲ್ಲೂಕು ಘಟಕಗಳ ಪದಾಧಿಕಾರಿಗಳ ನೇಮಕಕ್ಕೆ ಅನುಮತಿ ಕಡ್ಡಾಯ

ಚಂದ್ರಹಾಸ ಹಿರೇಮಳಲಿ
Published 15 ಡಿಸೆಂಬರ್ 2021, 4:48 IST
Last Updated 15 ಡಿಸೆಂಬರ್ 2021, 4:48 IST
ಕನ್ನಡ ಸಾಹಿತ್ಯ ಪರಿಷತ್ ಆದೇಶ
ಕನ್ನಡ ಸಾಹಿತ್ಯ ಪರಿಷತ್ ಆದೇಶ   

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕಗಳ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು ಹಾಗೂ ಗಡಿನಾಡು ಘಟಕಗಳ ಕಾರ್ಯಕಾರಿ ಸಮಿತಿಯ ನೇಮಕ ಪಟ್ಟಿಗೆ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್‌ ಜೋಶಿ ಅವರ ಅನುಮತಿ ಪಡೆಯುವುದು ಕಡ್ಡಾಯ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಹೊರಡಿಸಿರುವ ಆದೇಶಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರು ಸಹ ಕೇಂದ್ರ ಸಮಿತಿ ಅಧ್ಯಕ್ಷರಂತೆಯೇ ಚುನಾವಣೆಯಲ್ಲಿ ಆಜೀವ ಸದಸ್ಯರ ಮತಗಳನ್ನು ಪಡೆದೇ ಆಯ್ಕೆಯಾಗಿರುತ್ತಾರೆ. ಹಿಂದಿನಿಂದಲೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ತಾಲ್ಲೂಕು ಘಟಕಗಳ ಅಧ್ಯಕ್ಷರ ನೇಮಕಾತಿಯನ್ನು ಸ್ಥಳೀಯ ಸದಸ್ಯರ ಅಭಿಲಾಶೆಯಂತೆ ಮಾಡಿಕೊಂಡು ಬರಲಾಗಿದೆ. ಈ ಬಾರಿ ಹೊಸ ನಿಯಮ ಮಾಡುತ್ತಿರುವುದು ಸರಿಯಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌ ಅವರು ಮಹೇಶ್ ಜೋಶಿ ಅವರಿಗೆ ಬಹಿರಂಗ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಧ್ಯಕ್ಷರ ನಡೆ ವಿಭಿನ್ನವಾಗಿದೆ. ಆತುರದ ತೀರ್ಮಾನ. ನಾವು ನೀವು ನೀಡುವ ಸಂಬಳದ ಉಂಬಳಿಗಳಲ್ಲ. ನಿಮ್ಮಷ್ಟೇ ಜವಾಬ್ದಾರಿ, ಕರ್ತವ್ಯ ನಮಗೂ ಇದೆ. ನಿಮ್ಮ ಆದೇಶದಲ್ಲಿ ಸಂಘರ್ಷದ ಹಾದಿ ತುಳಿಯಲು ಪ್ರೇರಣೆ ಮಾಡುತ್ತಿರುವ ಶಂಕೆ ಕಾಣುತ್ತಿದೆ. ಇದು ಸರ್ವಾಧಿಕಾರಿ ನಡೆ, ಅರೆಬೆಂದ ತೀರ್ಮಾನಗಳು ಸರಿಯಿಲ್ಲ. ತಕ್ಷಣ ಈಗ ಹೊರಡಿಸಿದ ಸುತ್ತೋಲೆ ಹಿಂಪಡೆಯಿರಿ’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಪರಿಷತ್‌ ಸಂಪ್ರದಾಯದಂತೆ ಜಿಲ್ಲಾ ವ್ಯಾಪ್ತಿಯ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೈಲಾ ಪ್ರಕಾರ ಅನುಮೋದನೆಗೆ ಕಳುಹಿಸಲಾಗುವುದು. ಆದರೆ, ಸರ್ಕಾರದ ರೀತಿ ಸುತ್ತೋಲೆ ಹೊರಡಿಸಿ, ಹಿಡಿತ ಸಾಧಿಸಲು ಹವಣಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳ ಅಧ್ಯಕ್ಷರು ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ವಾಮದೇವಪ್ಪ ಪ್ರತಿಕ್ರಿಯಿಸಿದರು.

ಹಿಂದೆ ಒಂದು ಬಾರಿ ಅಧ್ಯಕ್ಷರು, ಪದಾಧಿಕಾರಿಗಳಾದವರನ್ನೇ ಮತ್ತೆ ನೇಮಿಸದೆ ಹೊಸಬರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ನೇಮಕಗೊಳ್ಳುವ ಸದಸ್ಯರು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿ ನಾಡು–ನುಡಿಗೆ ಸೇವೆ ಸಲ್ಲಿಸಿರಬೇಕು. ಕೇಂದ್ರ ಸಮಿತಿ ಅಧ್ಯಕ್ಷರ ಅನುಮೋದನೆಗೆ ಕಳುಹಿಸುವ ಪದಾಧಿಕಾರಿಗಳ ಸಂಪೂರ್ಣ ವಿವರ ನಮೂದಿಸಬೇಕು. ಅಪರಾಧದ ಹಿನ್ನೆಲೆ ಇರಬಾರದು. ಪರಿಷತ್ತಿನ ಘನತೆ, ಗೌರವಗಳಿಗೆ ಧಕ್ಕೆ ಬಾರದಂತೆ ನಿಯಮಾನುಸಾರ ನೇಮಕ ಮಾಡಬೇಕು. ಇಲ್ಲದಿದ್ದರೆ ನೇಮಕಗಳು ಅಸಿಂಧುವಾಗುತ್ತವೆ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಬಿಜೆಪಿ ಆಣತಿಯಂತೆ ಆದೇಶ
ಮಹೇಶ್ ಜೋಶಿ ಅವರು ಚುನಾವಣೆಗೆ ನಿಂತಾಗ ಬಿಜೆಪಿ, ಆರ್‌ಎಸ್‌ಎಸ್‌ ಅವರ ಬಂಬಲಕ್ಕೆ ನಿಂತಿದ್ದವು. ಅವರು ಗೆಲುವು ಪಡೆದ ನಂತರ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪಕ್ಷನಿಷ್ಠ ಸಾಹಿತ್ಯ ಪರಿಷತ್‌ ಸದಸ್ಯರನ್ನು ಪದಾಧಿಕಾರಿಗಳ ಪಟ್ಟಿಯಲ್ಲಿ ಸೇರಿಸಲು ಹುನ್ನಾರ ನಡೆದಿದೆ. ಅದರ ಫಲವಾಗಿ ಇಂತಹ ಆದೇಶ ಹೊರಡಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷರೊಬ್ಬರು ದೂರಿದರು.

*
ಬೈಲಾ ಪ್ರಕಾರ ನೇಮಕ ಪಟ್ಟಿಗೆ ಕೇಂದ್ರ ಸಮಿತಿಯ ಅನುಮೋದನೆ ಪಡೆಯಬೇಕು. ನಾನು ಕೇಂದ್ರ ಸಮಿತಿ ಚುಕ್ಕಾಣಿ ಹಿಡಿದಾಗ ಜಿಲ್ಲಾ, ತಾಲ್ಲೂಕು ಘಟಕಗಳ ರಚನೆಯ ಅಧಿಕಾರವನ್ನು ಆಯಾ ಜಿಲ್ಲೆಗಳ ಕಸಾಪ ಅಧ್ಯಕ್ಷರಿಗೆ ನೀಡಿದ್ದೆ. ಈಗಿನ ಅಧ್ಯಕ್ಷರ ಆದೇಶ ಅವರ ವಿವೇಚನೆಗೆ ಬಿಟ್ಟದ್ದು.
–ಮನು ಬಳಿಗಾರ್, ನಿಕಟಪೂರ್ವ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್

*
ಪರಿಷತ್ತಿನ ನಿಬಂಧನೆಯಲ್ಲಿ ಕೇಂದ್ರ ಘಟಕದ ಅನುಮೋದನೆ ಪಡೆಯಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಿಬಂಧನೆ ಪಾಲನೆಯಾಗುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅಧಿಕಾರದ ದುರುಪಯೋಗ, ಇಲ್ಲದ ಹುದ್ದೆಗಳ ಸೃಷ್ಟಿಗೆ ನನ್ನ ಅವಧಿಯಲ್ಲಿ ಅವಕಾಶ ನೀಡುವುದಿಲ್ಲ.
-ಮಹೇಶ್ ಜೋಶಿ, ಕಸಾಪ ಅಧ್ಯಕ್ಷ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.