ADVERTISEMENT

ಜೋಗ ಕಾರ್ಗಲ್ ಪ.ಪಂ ಚುನಾವಣೆ: ಅಧ್ಯಕ್ಷ ಗದ್ದುಗೆಗೆ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 16:08 IST
Last Updated 27 ಆಗಸ್ಟ್ 2024, 16:08 IST
ಕಾರ್ಗಲ್ ಪಟ್ಟಣ ಪಂಚಾಯಿತಿ ಆವರಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಸಂಭ್ರಮ ಆಚರಿಸಿತು
ಕಾರ್ಗಲ್ ಪಟ್ಟಣ ಪಂಚಾಯಿತಿ ಆವರಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಸಂಭ್ರಮ ಆಚರಿಸಿತು   

ಕಾರ್ಗಲ್: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ 9 ಸದಸ್ಯ ಬಲವುಳ್ಳ ಬಿಜೆಪಿ ಬದಲಾಗಿ ಏಕೈಕ ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ತೆಕ್ಕೆಗೆ ಆಡಳಿತ ಒಲಿದು ಬಂದಿದೆ.

ಒಟ್ಟು 11 ಸದಸ್ಯ ಬಲವುಳ್ಳ ಪಟ್ಟಣ ಪಂಚಾಯಿತಿ ಆಡಳಿತದಲ್ಲಿ ಈ ಹಿಂದೆ 9 ಬಿಜೆಪಿ ಸದಸ್ಯರು, ಒಬ್ಬರು ಕಾಂಗ್ರೆಸ್ ಸದಸ್ಯ ಮತ್ತು ಒಬ್ಬರು ಪಕ್ಷೇತರ ಸದಸ್ಯ ಬಲವನ್ನು ಹೊಂದಿತ್ತು.

2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಮಂಗಳವಾರ ನಡೆದಿದ್ದು, ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಎಲ್ಲರ ಊಹೆಯನ್ನು ಮೀರಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ.

ADVERTISEMENT

ಕಾಂಗ್ರೆಸ್ ಸದಸ್ಯ ಎಂ.ರಾಜು ಮತ್ತು ಬಿಜೆಪಿ ಸದಸ್ಯೆ ಲಲಿತಾ ಮಂಜುನಾಥ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಸದಸ್ಯ ಎಂ.ರಾಜು ಪರವಾಗಿ ಶಾಸಕ ಗೋಪಾಲಕೃಷ್ಣ ಬೇಳೂರು, ಬಿಜೆಪಿ ಸದಸ್ಯರಾದ ಪಿ.ಮಂಜುನಾಥ, ಸುಜಾತಾ ಚಂದ್ರು, ಲಕ್ಷ್ಮೀರಾಜು, ಜಯಲಕ್ಷ್ಮೀ ಲಕ್ಷ್ಮಣಗೊಲ್ಲ, ಪಕ್ಷೇತರ ಸದಸ್ಯ ಹರೀಶ್ ಗೌಡ ಸೇರಿ ಒಟ್ಟು 7 ಮತಗಳು ಚಲಾವಣೆಗೊಂಡವು. ಬಿಜೆಪಿ ಸದಸ್ಯೆ ಲಲಿತಾ ಮಂಜುನಾಥ ಪರವಾಗಿ ಉಮೇಶ್, ಬಾಲಸುಬ್ರಮಣ್ಯ, ನಾಗರಾಜ್ ವಾಟೇಮಕ್ಕಿ, ವಾಸಂತಿ ರಮೇಶ್ ಸೇರಿ ಕೇವಲ 5 ಮತಗಳು ಚಲಾವಣೆಗೊಂಡವು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಲಕ್ಷ್ಮೀ ಲಕ್ಷ್ಮಣಗೊಲ್ಲ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾದರು.

ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಿತು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ವಿಜಯೋತ್ಸವದ ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪ್ರಮುಖರಾದ ಕಲಸೆ ಚಂದ್ರಪ್ಪ, ಹೊಳೆಯಪ್ಪ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ರವಿ ಲಿಂಗನಮಕ್ಕಿ, ಬಿ. ಉಮೇಶ್, ವಿಜಯಕುಮಾರ್ ಕಾಳಯ್ಯ, ಶ್ರೀಲತಾ, ಗಿರೀಶ್ ಕೋವಿ, ತಾರಾಮೂರ್ತಿ, ಸತೀಶ್ ಮಹಾಲೆ, ಪಿ.ಕೆ.ಉಮ್ಮರ್, ಲೋಕೇಶ್ ಪ್ರಭು, ಗುರು ಲಿಂಗನಮಕ್ಕಿ ಉಪ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.