ADVERTISEMENT

ದೇಶದ ಸುರಕ್ಷತೆ ಎಲ್ಲರ ಜವಾಬ್ದಾರಿ

ಕಾರ್ಗಿಲ್ ವಿಜಯ ದಿನ: ನಿವೃತ್ತ ಕರ್ನಲ್ ರಾಮಚಂದ್ರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 5:03 IST
Last Updated 28 ಜುಲೈ 2022, 5:03 IST
ಶಿವಮೊಗ್ಗದ ಗೋಪಿ ವೃತ್ತದಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ ಮಾಡಲಾಯಿತು
ಶಿವಮೊಗ್ಗದ ಗೋಪಿ ವೃತ್ತದಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ ಮಾಡಲಾಯಿತು   

ಶಿವಮೊಗ್ಗ: ದೇಶ ಸೇವೆ ಹಾಗೂ ದೇಶದ ಸುರಕ್ಷತೆಗಾಗಿ ಸೈನಿಕರು ಮಾತ್ರ ಶ್ರಮಿಸುವುದಲ್ಲ. ಆ ಬಗ್ಗೆ ದೇಶದ ಪ್ರತಿಯೊಬ್ಬ ನಾಗರಿಕರೂ ಆಸಕ್ತಿ ತೋರಬೇಕು ಎಂದು ನಿವೃತ್ತ ಕರ್ನಲ್ ರಾಮಚಂದ್ರಪ್ಪ ತಿಳಿಸಿದರು.

ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಹಾಗೂ ಮಾಜಿ ಸೈನಿಕರ ಸಂಘಗಳ ಒಕ್ಕೂಟದಿಂದ ಮಂಗಳವಾರ ನಗರದ ಸೈನಿಕ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ 23ನೇ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಆಗಬೇಕು ಎಂದರು.

ದೇಶ ಎದುರಿಸಿದ ಹಲವು ಯುದ್ಧಗಳಲ್ಲಿ ಪಾಕಿಸ್ತಾನ ಕಪಟತನ ಪ್ರದರ್ಶಿಸಿದೆ. ಅದನ್ನು ಭಾರತ ಯಶಸ್ವಿಯಾಗಿ ಎದುರಿಸಿದೆ ಎಂದು ಹೇಳಿದರು.

ADVERTISEMENT

ಎನ್‌ಸಿಸಿ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಅರುಣ್ ಯಾದವ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಪ್ರತಿಯೊಬ್ಬರಲ್ಲೂ ಹುರುಪು, ಅಭಿಮಾನ, ದೇಶಭಕ್ತಿ ಮೂಡಿಸುವ ಸಂದರ್ಭ. ಹುತಾತ್ಮರ ಬಗ್ಗೆ ಗೌರವ, ಅಭಿಮಾನವೂ ಮೂಡುತ್ತದೆ ಎಂದರು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಕೆ.ಕೃಷ್ಣ ಮಾತನಾಡಿ, ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗೆ ಕೇಂದ್ರೀಯ ಸೈನಿಕ ಮಂಡಳಿಯಿಂದ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ವಿ.ಕೃಷ್ಣಾರೆಡ್ಡಿ, ಸಂಘದ ಕಾರ್ಯದರ್ಶಿ ದಿನೇಶ್, ಪದಾಧಿಕಾರಿಗಳಾದ ವೆಂಕಟೇಶ ರಾವ್, ಕೆ.ಎಸ್.ಉಮೇಶ್ ಬಾಪಟ್, ಉದಯ್, ಎಸ್.ರಘುನಾಥ್, ಶ್ರೀನಿವಾಸ ರೆಡ್ಡಿ, ಎಚ್.ಕೆ.ಶ್ರೀಕಾಂತ್, ಮಹಾಬಲೇಶ್ವರ ಹೆಗಡೆ ಪಾಲ್ಗೊಂಡಿದ್ದರು.

***

‘ಅಗ್ನಿಪಥ ಯೋಜನೆ; ಹಗುರ ಮಾತು ಸಲ್ಲ’

ಶಿವಮೊಗ್ಗ: ಅಗ್ನಿಪಥ ಯೋಜನೆ ಬಗ್ಗೆ ರಾಜಕಾರಣಕ್ಕಾಗಿ ಕೆಲವರು ಹಗುರವಾಗಿ ಮಾತಾಡುತ್ತಾರೆ. ಪ್ರತಿಭಟನೆ ನೆಪದಲ್ಲಿ ಸರ್ಕಾರದ ಆಸ್ತಿಗೆ ಹಾನಿ ಮಾಡುತ್ತಾರೆ. ಇದು ಸೈನಿಕರಿಗೆ ಮಾಡುವ ಅಪಮಾನ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಬಿ.ಹರಿಕೃಷ್ಣ ಹೇಳಿದರು.

ನಗರದಲ್ಲಿ ಯುವಮೋರ್ಚಾ ದಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಅಗ್ನಿಪಥ ಯೋಜನೆ ಜಾರಿಗೆ ತಂದರೆ ಕೆಲವರು ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಸೇರುವುದಾಗಿ ರಾಜಕಾರಣಿಗಳು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವೆಲ್ಲರೂ ನೆಮ್ಮದಿಯಿಂದ ಇರಲು ಸೈನಿಕರ ತ್ಯಾಗ, ಬಲಿದಾನ ಕಾರಣ’ ಎಂದು ಹೇಳಿದರು.

ಮೇಯರ್ ಸುನೀತಾ ಅಣ್ಣಪ್ಪ, ಸುಡಾ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಬಳ್ಳೇಕೆರೆ ಸಂತೋಷ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.