ತೀರ್ಥಹಳ್ಳಿ: ಜನರಿಂದ ದೂರೇ ಇಲ್ಲದಿದ್ದರೂ ಏಕಾಏಕಿ ಸಾಮೂಹಿಕವಾಗಿ ವೈದ್ಯರನ್ನು ವರ್ಗಾವಣೆ ಮಾಡಿರುವುದು ಬೇಸರದ ಸಂಗತಿ. ಒಂದೇ ಕುಟುಂಬದಂತೆ ನಾವೆಲ್ಲರೂ ಸಾರ್ವಜನಿಕರ ಸೇವೆಗೆ ನಿಂತಿದ್ದೆವು. ನರ್ಸಿಂಗ್ ಹೋಂ ನಡೆಸುತ್ತಿರುವ ಖಾಸಗಿ ವೈದ್ಯರೂ ಸರ್ಕಾರಿ ಆಸ್ಪತ್ರೆಯ ನೆರವಿಗೆ ನಿಂತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಭಾನುವಾರ ಇಲ್ಲಿನ ಮಾಧವ ಮಂಗಲ ಸಭಾ ಭವನದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಆಯುಕ್ತರ ಜೊತೆ ಮಾತುಕತೆ ನಡೆಸಿ ಬದಲಾವಣೆಗೆ ಪ್ರಯತ್ನಿಸಿದ್ದೇನೆ ಎಂದರು.
‘ಶಾಸಕರು ಆಸ್ಪತ್ರೆಯ ಜೊತೆಗೆ ನಿರಂತರವಾಗಿ ಸಂಪರ್ಕ ಸಾಧಿಸದಿದ್ದರೆ ಬದಲಾವಣೆ ಗೊತ್ತಾಗುವುದಿಲ್ಲ. ನಾನು ಆಯುಕ್ತರೊಂದಿಗೆ ಚರ್ಚಿಸಿದ ವಿಡಿಯೊ ತುಣುಕು ವೈದ್ಯರ ನಡುವೆ ಹಂಚಿಕೆಯಾಗಿತ್ತು. ಪರಿಣಾಮ ರಾಜ್ಯದ ವಿವಿಧ ಮೂಲೆಗಳಿಂದ ಕರೆ ಬಂದಿದೆ. ವರ್ಗಾವಣೆ ನೀತಿಯ ತೊಡಕುಗಳು ಸರಿಯಾಗಬೇಕಿದೆ. ನಮ್ಮ ಆಸ್ಪತ್ರೆಯನ್ನು ಪಿ.ಜಿ. ಸೆಂಟರ್ ಮಾಡುವ ಯೋಚನೆಯೂ ನಡೆಯುತ್ತಿದೆ. ಜೊತೆಗೆ ತಾಯಿ–ಮಗು ಆಸ್ಪತ್ರೆಯನ್ನು ಸ್ಥಾಪಿಸುವ ಪ್ರಯತ್ನ ಇದೆ’ ಎಂದು ಹೇಳಿದರು.
‘ಹಿಂದೆ ವೈದ್ಯರ ಗುಂಪುಗಳ ನಡುವೆ ಹೊಂದಾಣಿಕೆ ಇರುತ್ತಿರಲಿಲ್ಲ. ಅದರಿಂದ ರೋಗಿಗಳ ಸೇವೆಗೆ ತೊಡಕಾಗುತ್ತಿತ್ತು. ಇಲ್ಲಿ ಸೇವೆ ಸಲ್ಲಿಸಿದ ಗ್ರೂಪ್ ಡಿ ನೌಕರರೊಬ್ಬರು ‘ಅರಿವಳಿಕೆ’ ನೀಡುತ್ತಿದ್ದರು. ಇದು ರಾಜ್ಯದಲ್ಲಿಯೇ ಆಶ್ವರ್ಯದ ಸಂಗತಿಯಾಗಿತ್ತು’ ಎಂದು ಹಳೆಯ ಆಸ್ಪತ್ರೆಯ ಸ್ಥಿತಿಯನ್ನು ಸಹಕಾರಿ ಮುಖಂಡ ನಾಗರಾಜ ಶೆಟ್ಟಿ ನೆನಪಿಸಿದರು.
‘ಕೆಲವು ತಿಂಗಳಿನಿಂದ ಡಿ ವೃಂದದವರಿಗೆ ವೇತನ ಸರಿಯಾಗಿ ಸಿಗುತ್ತಿಲ್ಲ. ಹೀಗೆ ಮುಂದುವರೆದರೆ ಅವರ ಕುಟಂಬ ನಿರ್ವಹಣೆ ಹಾದಿ ತಪ್ಪುವ ಜೊತೆಗೆ ಆಸ್ಪತ್ರೆ ಗುಣಮಟ್ಟವೂ ಕೆಡುತ್ತದೆ. ಅವುಗಳ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯ ಇದೆ’ ಎಂದು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಡಾ. ಗಣೇಶ್ ಭಟ್ ಹೇಳಿದರು.
ವರ್ಗಾವಣೆಗೊಂಡ ಡಾ.ಪ್ರಭಾಕರ್, ಡಾ.ನಿಶ್ಚಲ್, ಡಾ.ರವಿಕುಮಾರ್, ಡಾ.ಮಹಿಮಾ, ಡಾ.ಗುರುರಾಜ್, ಸಿಬ್ಬಂದಿ ಪೂರ್ಣಿಮಾ, ತನುಜಾ ನಾಯಕ್, ಶ್ರೀಲತಾ, ಶ್ವೇತಾ, ಶೈಲಜಾ ಶೆಟ್ಟಿ, ಲೋಹಿತ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಹಿರಿಯ ವೈದ್ಯ ಡಾ. ನಾರಾಯಣ ಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸುರಭಿ ಕಿಶೋರ್, ಸೊಪ್ಪುಗುಡ್ಡೆ ರಾಘವೇಂದ್ರ, ಡಾ.ಜೀವಂಧರ್ ಜೈನ್, ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.