ADVERTISEMENT

ಗ್ಯಾರಂಟಿಗಳಿಂದ ₹1 ಲಕ್ಷ ಕೋಟಿ ಬಡವರ ಮಡಿಲಿಗೆ

ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಮಾವೇಶದಲ್ಲಿ ಸಚಿವ ಮಧುಬಂಗಾರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:15 IST
Last Updated 14 ಸೆಪ್ಟೆಂಬರ್ 2025, 5:15 IST
ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕ ಅಧ್ಯಕ್ಷರಾಗಿ ಎಂ.ರಮೇಶ್ ಶಂಕರಘಟ್ಟ ಅವರು ಅಧಿಕಾರ ಸ್ವೀಕರಿಸಿದರು. ಇಕ್ಕೇರಿ ರಮೇಶ್ ಅಧಿಕಾರ ಹಸ್ತಾಂತರಿಸಿದರು
ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕ ಅಧ್ಯಕ್ಷರಾಗಿ ಎಂ.ರಮೇಶ್ ಶಂಕರಘಟ್ಟ ಅವರು ಅಧಿಕಾರ ಸ್ವೀಕರಿಸಿದರು. ಇಕ್ಕೇರಿ ರಮೇಶ್ ಅಧಿಕಾರ ಹಸ್ತಾಂತರಿಸಿದರು   

ಶಿವಮೊಗ್ಗ:‘ರಾಜ್ಯದಲ್ಲಿ ಜಾರಿಗೊಳಿಸಿರುವ ಐದೂ ಗ್ಯಾರಂಟಿ ಯೋಜನೆಗಳಿಂದ ₹1 ಲಕ್ಷ ಕೋಟಿ ಮೊತ್ತವನ್ನು ವಿವಿಧ ಸೌಲಭ್ಯಗಳಡಿ ಬಡವರ ಮಡಿಲಿಗೆ ಹಾಕಲಾಗಿದೆ. ಇದರಲ್ಲಿ 58 ಸಾವಿರ ಕೋಟಿಗೂ ಹೆಚ್ಚು ಹಣ ಹಿಂದುಳಿದ ವರ್ಗದವರ ಪಾಲಿಗೆ ಬಂದಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ತಿಳಿಸಿದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ವಿಭಾಗದಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಹಾಗೂ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದೆ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಸಮಾಜದವರೂ ಶಕ್ತಿ ತುಂಬಿದ್ದು, ಇದರಲ್ಲಿ ಹಿಂದುಳಿದ ಸಮುದಾಯಗಳ ಪಾಲು ಹೆಚ್ಚಿದೆ. ಹೀಗಿದ್ದರೂ ಕೂಡ ಅವರನ್ನು ಕಳೆದುಕೊಂಡಿದ್ದೇವೆ ಅನಿಸುತ್ತಿದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಮುಂದಿನ ದಿನಗಳಲ್ಲಿ ಇವರನ್ನು ಪುನಃ ಪಕ್ಷಕ್ಕೆ ಕರೆತರುವ ಕಾರ್ಯ ಮಾಡಬೇಕು ಎಂದರು.  

‘ಶೋಷಿತ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬುವಲ್ಲಿ ಕಾಂಗ್ರೆಸ್ ಶ್ರಮಿಸುತ್ತಿದೆ. ಪ್ರಾಮಾಣಿಕ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು ಕಾಂಗ್ರೆಸ್ ಎಂದಿಗೂ ಕೈ ಬಿಟ್ಟಿಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ತಿಳಿಸಿದರು.

‘ಸಚಿವ ಮಧು ಬಂಗಾರಪ್ಪ ಐದು ವರ್ಷವೂ ಮಂತ್ರಿಯಾಗಿ ಮುಂದುವರೆಯುತ್ತಾರೆ.‌ ಇಲ್ಲಿ ಅವರಿಂದಲೇ ಕೆಲಸ ಮಾಡಿಸಿಕೊಂಡು ಅವರ ಹಿಂದೆಯೇ ಮಾತನಾಡುತ್ತಾರೆ.‌ ಇದು ಸರಿಯಲ್ಲ. ಮಧು ಬಂಗಾರಪ್ಪ ಶಿಕ್ಷಣ ಇಲಾಖೆಯಲ್ಲಿ ತಂದ ಯೋಜನೆಗಳನ್ನು ಯಾವ ಶಿಕ್ಷಣ ಮಂತ್ರಿಯೂ ಮಾಡಿಲ್ಲ. ಇವರು ಶಿಕ್ಷಣದಲ್ಲಿ ಕ್ರಾಂತಿ ತಂದಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಹೇಳಿದರು.

ತುಳಿತಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗದವರನ್ನು ಕಾಂಗ್ರೆಸ್ ಮುನ್ನಲೆಗೆ ತಂದಿದೆ. ಇಲ್ಲಿ ಬಿಜೆಪಿಯು ಜಾತಿ- ಧರ್ಮಗಳ ಮಧ್ಯ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದೆ ಎಂದು ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ಸುಂದರೇಶ್  ದೂರಿದರು.

ಗ್ಯಾರಂಟಿ ಯೋಜನೆ ಅನುಷ್ಟಾನ ಜಿಲ್ಲಾ ಮಟ್ಟದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಕಲಗೋಡು ರತ್ನಾಕರ, ನಾಗರಾಜ ಗೌಡ, ಎಂ.ಶ್ರೀಕಾಂತ್, ಜಿ.ಪಲ್ಲವಿ, ಸ್ವೇತ ಬಂಡಿ, ಗೋಣಿ ಮಾಲತೇಶ್, ಶ್ರೀನಿವಾಸ ಕರಿಯಣ್ಣ, ಕಲೀಂ ಪಾಶಾ, ಎಸ್.ಪಿ.ಶೇಷಾದ್ರಿ, ಇಕ್ಕೇರಿ ರಮೇಶ್, ಜಿ.ಡಿ.ಮಂಜುನಾಥ, ಪುಷ್ಪಾ ಶಿವಕುಮಾರ್, ಕಾಶಿ ವಿಶ್ವನಾಥ, ಬಿ.ಕೆ.ಮೋಹನ್, ಉಮಾಪತಿ ಇದ್ದರು.

ವಾಯ್ಸ್ ಆಫ್ ಒಬಿಸಿ ಗುರಿ

ಕಾಂಗ್ರೆಸ್ ನಿಂದ ಆದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಇದರಿಂದ ಪಕ್ಷಕ್ಕೆ ಬಲ ಹೆಚ್ಚುತ್ತದೆ. ಪಕ್ಷ ಸಂಘಟನೆಗೆ ಧ್ವನಿಗೂಡಿಸಬೇಕು. ಕೇಂದ್ರ ನಾಯಕರು ‘ವಾಯ್ಸ್ ಆಫ್ ಒಬಿಸಿ’ ಕಾರ್ಯಕ್ರಮದಡಿ 100 ದಿನದಲ್ಲಿ 100 ಕಾರ್ಯಕ್ರಮ ರೂಪಿಸಲು ಸೂಚಿಸಿದ್ದಾರೆ. ಆದರೆ ನಾವು ಕೇವಲ 20 ದಿನದಲ್ಲಿ 100 ಕಾರ್ಯಕ್ರಮ ಮಾಡುವ ಗುರಿ ಹೊಂದಿದ್ದೇವೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು. 

Cut-off box - ಸಾಮಾಜಿಕ ನ್ಯಾಯದ ಅಧ್ಯಯನವಾಗಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಕಲ್ಪಿಸಲು ಶ್ರಮಿಸಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಪದೇ ಪದೆ ನೆನೆಯುತ್ತೇವೆ. ಆದರೆ ಇಲ್ಲಿ ಅವರ ಪುತ್ರಿ ಗೀತಾ ಶಿವರಾಜ ಕುಮಾರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಬೇಸರ ವ್ಯಕ್ತಪಡಿಸಿದರು. ಜಾತಿಯಿಂದ ಮಾತ್ರ ಹಿಂದುಳಿದ ನಾಯಕರಾಗಲು ಸಾಧ್ಯವಿಲ್ಲ. ಸಮಾಜದ ವ್ಯವಸ್ಥೆ ಹೇಗೆ ರೂಪುಗೊಂಡಿದೆ ನೋಡಬೇಕು. ಇದರಿಂದ ಸಾಮಾಜಿಕ ನ್ಯಾಯ ಕಲ್ಪಿಸಬಹುದು. ಇಲ್ಲಿ ಸಾಮಾಜಿಕ ನ್ಯಾಯದ ಅಧ್ಯಯನ ಆಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.