ADVERTISEMENT

ಕೀಳುಮಟ್ಟದ ಕಾಯ್ದೆ ನಮಗೆ ಬೇಕೆ?: ಶಾಸಕ ಚನ್ನಬಸಪ್ಪ

ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ ಮಂಡನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 3:52 IST
Last Updated 27 ಡಿಸೆಂಬರ್ 2025, 3:52 IST
   

ಶಿವಮೊಗ್ಗ: ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ–2025ನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಶುಕ್ರವಾರ ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಈ ವಿಧೇಯಕವು ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನದ ಪರಿಚ್ಛೇದ 19(1), ಮತ್ತು (2)ರ ಪರಿಚ್ಛೇದದಡಿ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದರು. 

ADVERTISEMENT

ರಾಜ್ಯ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ. ಸರಕಾರದ ವಿರುದ್ಧ ಮಾತನಾಡುವವರ ಬಾಯಿಮುಚ್ಚಿಸುವ ಸಾಧನವಾದ ಈ ವಿಧೇಯಕದಲ್ಲಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿ–ನಿಯಮಗಳ ವಿರುದ್ಧ ಟೀಕೆ ಮಾಡುವುದು, ಸಾಮಾಜಿಕ ಚರ್ಚೆ, ವ್ಯಂಗ್ಯವಾಡುವುದು ಅಥವಾ ಸತ್ಯವನ್ನು ಹೇಳುವುದನ್ನು ದ್ವೇಷ ಎಂದು ಪರಿಗಣಿಸುವ ಅಪಾಯ ಈ ವಿಧೇಯಕದಲ್ಲಿದೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುವುದಾಗಿದೆ. ಜನಸಾಮಾನ್ಯರನ್ನು ಅಪಾರಾಧಿಗಳನ್ನಾಗಿ ಮಾಡುವ ಈ ಕೀಳುಮಟ್ಟದ ಕಾಯ್ದೆ ನಮಗೆ ಬೇಕೆ? ತುಂಗಾನದಿ ತಟದಲ್ಲಿ ಮುಸ್ಲಿಮರು ಬಾಂಬ್‌ಬ್ಲಾಸ್ಟ್ ಮಾಡಿದ್ದನ್ನು ಪ್ರಸ್ತಾಪಿಸಿದರೆ ದ್ವೇಷ ಭಾಷಣವಾಗುತ್ತದೆಯೇ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಮೋಹನ್‌ರೆಡ್ಡಿ, ಅಶೋಕ್‌ನಾಯ್ಕ, ನಾಗರಾಜ್, ಜ್ಞಾನೇಶ್ವರ್, ಸುರೇಶ್, ಮಾಲತೇಶ್, ದೀನ್‌ದಯಾಳ್, ಕೆ.ವಿ. ಅಣ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.