ADVERTISEMENT

ಜಲಶಕ್ತಿ ಅಭಿಯಾನ ಜಾರಿಯಲ್ಲಿ ರಾಜ್ಯ ಮುಂದು

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 12:55 IST
Last Updated 13 ಆಗಸ್ಟ್ 2021, 12:55 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ   

ಶಿವಮೊಗ್ಗ: ಜಲಶಕ್ತಿ ಅಭಿಯಾನವನ್ನು ಸಮರ್ಪಕವಾಗಿ ಅನನುಷ್ಠಾನಗೊಳಿಸುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಜಲಶಕ್ತಿ ಅಭಿಯಾನಕ್ಕೆ ಮಾರ್ಚ್ 22ರಂದು ಪ್ರಧಾನ ಮಂತ್ರಿ ಮೋದಿ ಅವರು ಚಾಲನೆ ನೀಡಿದ್ದರು. ಈಗ ಅದು ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಯೋಜನೆಯ ಪ್ರಮುಖ ಉದ್ದೇಶವೇ ಅಂತರ್ಜಲ ಹೆಚ್ಚಿಸುವುದು. ಕೆರೆಗಳ ನಿರ್ಮಾಣ, ಕೃಷಿ ಹೊಂಡ ಚೆಕ್ ಡ್ಯಾಂ ಮುಂತಾದವುಗಳ ನಿರ್ಮಾಣ, ವಿಶೇಷವಾಗಿ ಬಯಲುಸೀಮೆ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವುದಾಗಿದೆ. ಕೇಂದ್ರ ಸರ್ಕಾರ ನಮ್ಮ ಕೆಲಸವನ್ನು ಗುರುತಿಸಿ 13 ಕೋಟಿ ಮಾನವ ದಿನಗಳನ್ನು ನೀಡಿತ್ತು. ಅದನ್ನು ನವೆಂಬರ್ ತಿಂಗಳಲ್ಲಿಯೇ ಯಶಸ್ವಿಯಾಗಿ ಮುಗಿಸಿ ಕೇಂದ್ರಕ್ಕೆ ಮತ್ತೆ ಬೇಡಿಕೆ ಸಲ್ಲಿಸಿ ಎರಡು ಕೋಟಿ ಮಾನವ ದಿನಗಳನ್ನು ಹೆಚ್ಚುವರಿಯಾಗಿ ಪಡೆದು ₹ 800 ಕೋಟಿ ಕೇಂದ್ರದಿಂದ ಬಿಡುಗಡೆ ಮಾಡಿಸಿಕೊಂಡಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳಿಗೆ ತರಬೇತಿ ಶಿಬಿರ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಆರಂಭಗೊಂಡ ತರಬೇತಿ ಶಿಬಿರ ರಾಜ್ಯದಾದ್ಯಂತ ಮುಂದುವರಿಯುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರಿಗೂ ಇದನ್ನು ವಿಸ್ತರಿಸಲಾಗುವುದು ಎಂದರು.

28 ಸಾವಿರ ಕೆರೆ ಅಭಿವೃದ್ಧಿ

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಜ್ಯದ 28 ಸಾವಿರ ಕೆರೆಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಅಭಿವೃದ್ಧಿಪಡಿಸಲಾಗುವುದು. ಒತ್ತುವರಿಯನ್ನು ಕಡ್ಡಾಯವಾಗಿ ತೆರವುಗೊಳಿಸಲಾಗುವುದು. ಯಾರು ಎಷ್ಟೇ ಪ್ರಭಾವಶಾಲಿಗಳಾಗಿರಲಿ, ಒತ್ತುವರಿಯಾಗಿದ್ದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮೊದಲು ಮನವಿ ಮಾಡಲಾಗುವುದು. ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಚನ್ನಬಸಪ್ಪ, ನಾಗರಾಜ್, ಕೆ.ವಿ. ಅಣ್ಣಪ್ಪ, ಹಿರಣ್ಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.