ಶಿವಮೊಗ್ಗ: ಜಿಲ್ಲೆಯಲ್ಲಿ ಒತ್ತುವರಿ ಆಗಿರುವ 1,054 ಕೆರೆಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು 10 ವರ್ಷಗಳ ಹಿಂದೆಯೇ ಆದೇಶವಾಗಿದೆ. ಆದರೆ ಸಂಬಂಧಿಸಿದ ಕಡತಗಳು ಇನ್ನೂ ಭೂ ದಾಖಲೆಗಳ ಉಪನಿರ್ದೇಶಕರ (ಡಿಡಿಎಲ್‌ಆರ್) ಕಚೇರಿಯ ಕಪಾಟಿನಲ್ಲಿ ಕೊಳೆಯುತ್ತಿವೆ.
ಈ ಅಚ್ಚರಿಯ ಸಂಗತಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಶನಿವಾರ ಡಿಡಿಎಲ್‌ಆರ್ ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಕಂಡುಬಂದಿತು.
ಕೆಲಸದಲ್ಲಿ ಅನಗತ್ಯ ವಿಳಂಬ, ವಿಪರೀತ ಭ್ರಷ್ಟಾಚಾರ ಹಾಗೂ ಕುಂದು ಕೊರತೆಗಳನ್ನು ವಿಲೇವಾರಿ ಮಾಡದೇ ಅರ್ಜಿದಾರರನ್ನು ಪದೇ ಪದೇ ಕಚೇರಿಗೆ ಅಲೆದಾಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಶಿವಮೊಗ್ಗದ ಭೂ ದಾಖಲೆಗಳ ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರ ಕಚೇರಿಗಳ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸ್ವಯಂಪ‍್ರೇರಿತವಾಗಿ (ಸುಮೊಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ ಸೂಚನೆಯ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಶನಿವಾರ ಡಿಡಿಎಲ್ಆರ್ ಕಚೇರಿಯಲ್ಲಿ ತಪಾಸಣೆ ನಡೆಸಲಾಯಿತು.
ಜಿಲ್ಲೆಯಲ್ಲಿರುವ 4,792 ಕೆರೆಗಳ ಪೈಕಿ 1,829 ಒತ್ತುವರಿ ಆಗಿರುವುದನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು 2015ರಲ್ಲಿಯೇ ಜಿಲ್ಲಾಡಳಿತದಿಂದ ಆದೇಶವಾಗಿದೆ. ಅದರಲ್ಲಿ 775 ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ. ಇನ್ನೂ 1,054 ಕೆರೆಗಳ ತೆರವು ಬಾಕಿ ಉಳಿದಿರುವುದು ದಾಖಲೆ ಪರಿಶೀಲನೆ ವೇಳೆ ಬಹಿರಂಗವಾಗಿದೆ.
ಜಿಲ್ಲೆಯಲ್ಲಿ 4,547 ಸರ್ಕಾರಿ ಜಾಗಗಳು ಒತ್ತುವರಿ ಆಗಿರುವುದನ್ನು ಗುರುತಿಸಲಾಗಿದೆ. ಅವುಗಳ ತೆರವು ಪ್ರಕ್ರಿಯೆ ವರ್ಷಗಳಿಂದ ಬಾಕಿ ಉಳಿಸಲಾಗಿದೆ ಎಂಬುದು ತಿಳಿದುಬಂದಿತು.
ಡಿಡಿಎಲ್‌ಆರ್ ಅರೆನ್ಯಾಯಿಕ ವಿಚಾರಣೆ ಅಧಿಕಾರ ಬಳಸಿ ಇತ್ಯರ್ಥಗೊಳಿಸಬೇಕಾದ 95 ಪ್ರಕರಣ ಬಾಕಿ ಇದ್ದು, ಅದರಲ್ಲಿ 12 ಪ್ರಕರಣಗಳಲ್ಲಿ 90 ದಿನಗಳು ಮೀರಿರುವುದು ಕಂಡುಬಂದಿತು. ಗೈರು ವಿಲೇ 32 ಪ್ರಕರಣ ಇದ್ದು, ಮೂಲ ಕಡತ ಬಾಕಿ ಇಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರಿ ದರಕಾಸ್ತು ಆರು ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ವಿಲೇವಾರಿ ಮಾಡಬೇಕಿದೆ. ಅದರೆ ಮಾಡಿಯೇ ಇಲ್ಲ. ಸಾರ್ವಜನಿಕ ಕುಂದುಕೊರತೆ ಅರ್ಜಿ 37 ಇದ್ದು ಅವುಗಳನ್ನು ಡಿಡಿಎಲ್‌ಆರ್ ಮುಟ್ಟಿಯೇ ಇಲ್ಲ. ತಿದ್ದುಪಡಿ ಬಾಕಿ ಇರುವ ಏಳು ಅರ್ಜಿಗಳು ಬಾಕಿ ಉಳಿದಿವೆ. ದಾಖಲೆ ರಹಿತ ಜನವಸತಿಗೆ ಸಂಬಂಧಿಸಿದ 17 ಪ್ರಕರಣ ಬಾಕಿ ಉಳಿದಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
‘ಕಡತಗಳು ಮುಂದುವರೆದು ಕೆಲಸ ಆಗಬೇಕಾದರೆ ಪ್ರತೀ ಟೇಬಲ್‌ಗೆ ₹3 ಸಾವಿರ ಲಂಚ ಕೊಡಬೇಕಿದೆ’ ಎಂದು ಲೋಕಾಯುಕ್ತ ಪೊಲೀಸರ ಎದುರು ಸಾರ್ವಜನಿಕರೊಬ್ಬರು ಅಳಲು ತೋಡಿಕೊಂಡರು.
ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ವೀರಬಸಪ್ಪ ಕುಸುಲಾಪುರ, ಗುರುರಾಜ್ ಮೈಲಾರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಲೋಕಾಯುಕ್ತ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಡಿಡಿಎಲ್‌ಆರ್ ಕಚೇರಿ ಮಾತ್ರವಲ್ಲ ಏಳು ಎಡಿಎಲ್‌ಆರ್ ಕಚೇರಿಗಳ ಮೇಲೂ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದ್ದೇವೆ. ದಾಳಿ ಮುಂದುವರೆಯಲಿದೆಮಂಜುನಾಥ ಚೌಧರಿ ಶಿವಮೊಗ್ಗ ಲೋಕಾಯುಕ್ತ ಎಸ್ಪಿ
ಪರಿಶೀಲನೆ ವೇಳೆ ಅಧಿಕಾರಿ ಗೈರು!
ಭೂ ದಾಖಲೆಗಳ ಉಪನಿರ್ದೇಶಕರ (ಡಿಡಿಎಲ್‌ಆರ್) ಕಚೇರಿಗೆ ಶನಿವಾರ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಸ್ವತಃ ಡಿಡಿಎಲ್‌ಆರ್ ಆಶಾ ಕುಮಾರಿ ಕಚೇರಿಯಲ್ಲಿ ಇರಲಿಲ್ಲ. ‘ಮೇಡಂ ಬೆಂಗಳೂರಿಗೆ ಹೋಗಿದ್ದಾರೆ. ಅವರು ಸೆಪ್ಟೆಂಬರ್ 30ರಿಂದ ಕಚೇರಿಗೆ ಬಂದಿಲ್ಲ’ ಎಂದು ಅಲ್ಲಿನ ಸಿಬ್ಬಂದಿ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದರು. ‘ಕಚೇರಿಯಲ್ಲಿ ಇಡಬೇಕಾದ ಅಧಿಕೃತ ಸರ್ಕಾರಿ ವಾಹನವೂ ಅಧಿಕಾರಿಯ ಮನೆಯಲ್ಲಿ ಇರುವುದು ಪರಿಶೀಲನೆ ವೇಳೆ ಕಂಡುಬಂದಿತು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
ಮಂಡ್ಲಿ ಕೆರೆ ಎಂಟು ಎಕರೆ ಒತ್ತುವರಿ
ಶಿವಮೊಗ್ಗ ನಗರ ವ್ಯಾಪ್ತಿಯ ಮಂಡ್ಲಿಯಲ್ಲಿ ಸರ್ವೆ ನಂ. 42ರಲ್ಲಿ 12 ಎಕರೆ ಕೆರೆ ಇದ್ದರೂ ಅದರಲ್ಲಿ ಎಂಟು ಎಕರೆ ಒತ್ತುವರಿಯಾಗಿದೆ. 2015ರಲ್ಲಿಯೇ ಒತ್ತುವರಿ ಗುರುತಿಸಿ ಮಾರ್ಕ್ ಮಾಡಿ ಮ್ಯಾಪಿಂಗ್ ಮಾಡಿದ್ದಾರೆ. ಇವತ್ತಿನವರೆಗೂ ತೆರವುಗೊಳಿಸಿಲ್ಲ ಎಂಬುದು ಲೋಕಾಯುಕ್ತ ಪೊಲೀಸರ ಪರಿಶೀಲನೆ ವೇಳೆ ಕಂಡುಬಂದಿತು. ‘ಡಿಡಿಎಲ್‌ಆರ್ ಕಚೇರಿ ದಾಖಲೆಗಳಲ್ಲಿ 775 ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ ಎಂದು ದಾಖಲಿಸಲಾಗಿದೆ. ಆದರೆ ಆ ಕೆರೆಗಳು ನಿಜವಾಗಿಯೂ ಒತ್ತುವರಿ ಮುಕ್ತವಾಗಿವೆಯೇ ಎಂಬುದನ್ನು ಭೌತಿಕವಾಗಿಯೂ ಪರಿಶೀಲಿಸಲಾಗುವುದು’ ಎಂದು ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.