ADVERTISEMENT

ಪೋಡಿಮುಕ್ತ ಗ್ರಾಮ ಯೋಜನೆಗೆ ವೇಗ: ತಹಶೀಲ್ದಾರ್ ಪರುಸಪ್ಪ ಕುರುಬರ

ಇ-ಪೌತಿ ಖಾತೆ ವಿತರಣೆ; ದಾಖಲೆಗಳ ಡಿಜಿಟಲೀಕರಣ–ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 6:29 IST
Last Updated 13 ಜುಲೈ 2025, 6:29 IST
ಪರುಸಪ್ಪ ಕುರುಬರ
ಪರುಸಪ್ಪ ಕುರುಬರ   

ಭದ್ರಾವತಿ: ತಾಲ್ಲೂಕಿನಲ್ಲಿ 800 ಪೋಡಿ ಖಾತೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 6 ತಿಂಗಳಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳನ್ನು ಬಗೆಹರಿಸಿ, ಪೋಡಿಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ತಾಲ್ಲೂಕಿನಲ್ಲಿ ವೇಗ ನೀಡಲಾಗಿದೆ ಎಂದು ತಹಶೀಲ್ದಾರ್ ಪರುಸಪ್ಪ ಕುರುಬರ ತಿಳಿಸಿದರು.

ಉಳಿದ ಪ್ರಕರಣಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ತಾಲ್ಲೂಕಿನಲ್ಲಿ ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು ಎಂದು ಶುಕ್ರವಾರ ಮಾಹಿತಿ ನೀಡಿದರು.

ಈ ಯೋಜನೆಯ ಅನುಷ್ಠಾನದಿಂದಾಗಿ ಕಚೇರಿಗಳಿಗೆ ಅಲೆದಾಟ, ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ಬಹುವರ್ಷಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ಅಗತ್ಯ ಇರುವ ಕಡೆಗಳಲ್ಲಿ ಅರಣ್ಯ ಇಲಾಖೆಯ ನೆರವು ಪಡೆಯಲಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು. 

ADVERTISEMENT

ಇ-ಪೌತಿ ಖಾತೆ ಆಂದೋಲನ: ರಾಜ್ಯ ಸರ್ಕಾರ ಇ-ಪೌತಿ ಆಂದೋಲನ ಜಾರಿಗೊಳಿಸಿದ್ದು, ತಾಲ್ಲೂಕಿನಲ್ಲಿ 7,000 ಪೌತಿ ಖಾತೆಗಳನ್ನು ಗುರುತಿಸಲಾಗಿದೆ. ಮನೆಮನೆಗೆ ತೆರಳಿ ದಾಖಲೆ ಸಂಗ್ರಹಿಸಿ ವಾರಸುದಾರರಿಗೆ ಪೌತಿ ಖಾತೆ ಮಾಡಿ ಕೊಡಲಾಗುವುದು. ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಹಶೀಲ್ದಾರ್ ಕೋರಿದರು.

ಸರ್ಕಾರಿ ಆಸ್ತಿಗಳನ್ನು ಗುರುತಿಸಿ ದಾಖಲಿಸುವ ಭೂ ಸುರಕ್ಷಾ ಯೋಜನೆ ಈಗಾಗಲೇ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಕೆರೆ ಸೇರಿದಂತೆ ಸರ್ಕಾರಿ ಆಸ್ತಿಗಳ ಒತ್ತುವರಿ ತೆರವು ಕಾರ್ಯ ನಡೆಯಲಿದೆ ಎಂದರು.

ದಾಖಲೆ ಡಿಜಿಟಲೀಕರಣ: ಎಲ್ಲ ರೀತಿಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕಳೆದ 6 ತಿಂಗಳ ಅವಧಿಯಲ್ಲಿ 9 ಲಕ್ಷ ಪುಟಗಳನ್ನು ಇದಕ್ಕೆ ಒಳಪಡಿಸಲಾಗಿದೆ. ಅಂದಾಜು 80 ಲಕ್ಷ ಪುಟಗಳ ಡಿಜಿಟಲೀಕರಣ ಬಾಕಿ ಉಳಿದಿದೆ. ಮುಂದಿನ 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. 

ಗ್ರೇಡ್-2 ತಹಶೀಲ್ದಾರ್ ಮಂಜಾನಾಯ್ಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.