ಆನವಟ್ಟಿ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚಂದನಾ ಕೆ.ಎಂ. ಎಸ್‌ಎಸ್‌ಎಲ್‌ಸಿಯಲ್ಲಿ 620 ಪಡೆದು ವಿಶೇಷ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ತಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಇವರು ಚಿಕ್ಕ ಕುಟುಂಬ ದಡ್ಡಿಕೊಪ್ಪ ಗ್ರಾಮದ ನಿವಾಸಿ ರೇಣುಕಮ್ಮ ಕೃಷ್ಣಪ್ಪ ಅವರದ್ದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆನವಟ್ಟಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಷ್ಟಪಟ್ಟು ಓದಿಸುತ್ತಿದ್ದಾರೆ. ‘ಎಸ್‌ಎಸ್‌ಎಲ್‌ಸಿಯಲ್ಲಿ ಮಗಳು ಪಡೆದ ಅಂಕಗಳನ್ನು ನೋಡಿ ಬಹಳಷ್ಟು ಸಂತಸವಾಗಿದೆ. ಮಗಳ ಬಗ್ಗೆ ಹೆಮ್ಮೆ ಎನಿಸುತ್ತಿದೆ’ ಎಂದು ಸಂತಸ ಹಂಚಿಕೊಂಡರು.
‘ಟ್ಯೂಷನ್‌ಗೆ ಹೋಗದೆ, ಶಾಲೆಯಲ್ಲಿನ ನಿತ್ಯ ಪಾಠ ಹಾಗೂ ಪರೀಕ್ಷೆ ಹತ್ತಿರದ ಸಮಯದಲ್ಲಿ ಶಿಕ್ಷಕರು ನಡೆಸಿರುವ ವಿಶೇಷ ತರಗತಿಗಳಿಂದಾಗಿ ಫಲಿತಾಂಶ ಉತ್ತಮವಾಗಿ ಬರಲು ಸಹಕಾರಿಯಾಯಿತು. ಕನ್ನಡ ಹೊರತುಪಡಿಸಿ ಎಲ್ಲ ವಿಷಯಗಳಲ್ಲೂ 100ಕ್ಕೆ 100 ಅಂಕ ಬಂದಿವೆ. ಕನ್ನಡದಲ್ಲಿ 100 ಅಂಕ ಬಂದಿದ್ದು, ಹೆಚ್ಚು ಅಂಕಗಳನ್ನು ನಿರೀಕ್ಷಿಸಿದ್ದೆ. ಹಾಗಾಗಿ ಮರುಮೌಲ್ಯಮಾಪನಕ್ಕೆ ಹಾಕುತ್ತೇನೆ. ಮುಂದೆ ಎಂಜಿನಿಯರ್ ಮಾಡುವ ಆಸೆ ಇದೆ’ ಎಂದು ಚಂದನಾ ಕೆ.ಎಂ. ತಿಳಿಸಿದರು.
ಸಾಧನೆ ಮಾಡಿದ ಚಂದನಾ ಅವರಿಗೆ ಮುಖ್ಯಶಿಕ್ಷಕ ವೀರಭದ್ರಪ್ಪ, ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಅಭಿನಂದನೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.