ತೀರ್ಥಹಳ್ಳಿ: ‘ಅರಣ್ಯ ಸಚಿವರಿಗೆ ಪಶ್ಚಿಮಘಟ್ಟದ ಜನರ ಜೀವನ ವಿಧಾನ, ಮರಗಿಡಗಳ ಕುರಿತು ತಿಳಿವಳಿಕೆ ಇಲ್ಲ. ವಿಜ್ಞಾನಿಯಾಗಿರುವ ಕಸ್ತೂರಿ ರಂಗನ್ ಪಶ್ಚಿಮ ಘಟ್ಟಗಳ ಬಗ್ಗೆ ವರದಿ ನೀಡಲು ಪರಿಸರ ತಜ್ಞ ಅಲ್ಲ’ ಎಂದು ಶಾಸಕ ಆರಗ ಜ್ಞಾನೇಂದ್ರ ಗುಡುಗಿದರು.
ಮಂಗಳವಾರ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತಾಲ್ಲೂಕು ಕಚೇರಿ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಮೂಲ ನಿವಾಸಿಗಳಿಲ್ಲದಿದ್ದರೆ ಸಹ್ಯಾದ್ರಿಯ ಅರಣ್ಯ ಶ್ರೇಣಿ ಉಳಿಯುತ್ತಿರಲಿಲ್ಲ. ದೆಹಲಿಯಲ್ಲಿ ಕುಳಿತು ಉಪಗ್ರಹ ಚಿತ್ರ ಬಳಸಿ ಅವೈಜ್ಞಾನಿಕವಾಗಿ ಸರ್ವೆ ಮಾಡಲಾಗಿದೆ. ಈಗಾಗಲೇ ಹಲವು ಕಾಯ್ದೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದು, ವರದಿ ಜಾರಿಯಾದರೆ ಇನ್ನಷ್ಟು ಸಮಸ್ಯೆ ಬಿಗಡಾಯಿಸಲಿದೆ. ನೀವು ಯಾರ ಕುತ್ತಿಗೆಗೆ ನೇಣು ಹಾಕಲು ಹೊರಟ್ಟಿದ್ದೀರಾ ಎಂಬುದು ತಿಳಿದಿದೆಯೇ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಸರ್ಕಾರ ಗುಡ್ಡಗಾಡು, ಮಲೆನಾಡು ಪ್ರದೇಶದ ಜನತೆಗೆ ದ್ರೋಹ ಮಾಡುತ್ತಿದೆ. ಹಸಿರುಪೀಠ ವರದಿ ಜಾರಿಗೆ ಒತ್ತಾಯಿಸುತ್ತಿದೆ ಎಂಬ ಮಾತ್ರಕ್ಕೆ ರಾಜ್ಯ ಸರ್ಕಾರ ಸಮ್ಮತಿಸುವ ಅಗತ್ಯವಿಲ್ಲ. ಗ್ರಾಮಸಭೆಯ ಮೂಲಕ ಒಪ್ಪಿಗೆ ಪಡೆಯುವ ಬದಲು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ವರದಿ ತಯಾರಿಸಲಾಗಿದೆ’ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಹೆದ್ದೂರು, ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಮುಖಂಡರಾದ ಆರ್.ಮದನ್, ನಾಗರಾಜ ಶೆಟ್ಟಿ, ಹುಲ್ಕುಳಿ ಮಹೇಶ್, ಬೇಗುವಳ್ಳಿ ಸತೀಶ್, ಚಂದುವಳ್ಳಿ ಸೋಮಶೇಖರ್, ರಕ್ಷಿತ್ ಮೇಗರವಳ್ಳಿ, ಗೀತಾ ಶೆಟ್ಟಿ, ಸುಮಾ ರಾಮಚಂದ್ರ, ತಳಲೆ ಪ್ರಸಾದ್ ಶೆಟ್ಟಿ, ಇದ್ದರು.
ಶಿವಮೊಗ್ಗ ಚಿಕ್ಕಮಗಳೂರು ಕೊಡಗು ದಕ್ಷಿಣ ಕನ್ನಡ ಉತ್ತರ ಕನ್ನಡ ಹಾಸನ ಜಿಲ್ಲೆಯ ಜನರು ಮೂಲ ನೆಲೆ ಕಳೆದುಕೊಳ್ಳಲಿದ್ದಾರೆ. ಪಶ್ಚಿಮಘಟ್ಟದ ಪೂರ್ಣ ಅಧ್ಯಯನ ಮಾಡುವ ವ್ಯವಧಾನವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ತೋರಿಸುತ್ತಿಲ್ಲ.ನವೀನ್ ಹೆದ್ದೂರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.