ADVERTISEMENT

ಮಳೆಗಾಲದಲ್ಲೇ ಮಂಗನ ಕಾಯಿಲೆಗೆ ಮುಂಜಾಗ್ರತೆ

ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಯಾನಂದ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 11:15 IST
Last Updated 17 ಜೂನ್ 2019, 11:15 IST
ಶಿವಮೊಗ್ಗದಲ್ಲಿ ಸೋಮವಾರ ನಡೆದ ಮಂಗನಕಾಯಿಲೆ ನಿಯಂತ್ರಣ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಮಾತನಾಡಿದರು.
ಶಿವಮೊಗ್ಗದಲ್ಲಿ ಸೋಮವಾರ ನಡೆದ ಮಂಗನಕಾಯಿಲೆ ನಿಯಂತ್ರಣ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಮಾತನಾಡಿದರು.   

ಶಿವಮೊಗ್ಗ:ಮಳೆಗಾಲದ ಬಳಿಕ ಮಲೆನಾಡಿನಲ್ಲಿ ಕಾಣಿಸಿಕೊಳ್ಳುವ ಮಂಗನಕಾಯಿಲೆ ತಡೆಗೆ ಇಂದಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆಎಫ್‌ಡಿ ಸಮನ್ವಯ ಸಮಿತಿಯ ಸಭೆ ಹಾಗೂ ನಿಫಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ವರ್ಷವೂ ಕೆಎಫ್‌ಡಿ ಹೊಸ ಪ್ರದೇಶಗಳಿಗೆ ಹರಡುತ್ತಿದೆ. ಕೆಲವು ವರ್ಷ ತೀರ್ಥಹಳ್ಳಿ ತಾಲ್ಲೂಕಿಗೆ ಸೀಮಿತವಾಗಿದ್ದ ಕಾಯಿಲೆ ಕಳೆದ ಬಾರಿ ಸಾಗರ ತಾಲ್ಲೂಕು ಅರಳಗೋಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿತು. ಈ ಬಾರಿ ಕಾಯಿಲೆ ಹರಡುವ ಸಾಧ್ಯತೆ ಇರುವ ಗ್ರಾಮಗಳನ್ನು ಗುರುತಿಸಬೇಕು. ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮ ಮುಂದುವರಿಸಬೇಕು. ಜಾನುವಾರುಗಳಿಗೆ ಲಸಿಕೆ ಸೇರಿದಂತೆ ಎಲ್ಲಾ ಕ್ರಮ ಕೈಗೊಳ್ಳಬೇಕು. ಲಸಿಕೆ, ತೈಲ, ಔಷಧ ಪಡೆಯುವ ಪ್ರಕ್ರಿಯೆ ಆರಂಭಿಸಬೇಕು. ಎಲ್ಲಾ ಔಷಧಗಳನ್ನೂಮಳೆಗಾಲ ಮುಗಿಯುವ ಮೊದಲೇ ಸಿದ್ಧಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಕೆಎಫ್‌ಡಿ ಎದುರಿಸಲು ಇಲಾಖೆಗಳ ಮಧ್ಯೆ ಸಮನ್ವಯದ ಅಗತ್ಯವಿದೆ. ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪಶು ಸಂಗೋಪನಾ ಇಲಾಖೆಗಳು ನಿಗದಿಪಡಿಸಿರುವ ಕಾರ್ಯಗಳನ್ನು ಮಾರ್ಗಸೂಚಿ ಪ್ರಕಾರ ಕೈಗೊಳ್ಳಬೇಕು ಎಂದರು.

ಕಾಯಿಲೆ ಹರಡಬಹುದಾದ ಸ್ಥಳಗಳಲ್ಲಿ ಪ್ರವಾಸಿಗರಿಗೆ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಬೇಕು. ಮಂಗಗಳು ಸತ್ತು ಬಿದ್ದಿರುವುದು ಕಂಡು ಬಂದಲ್ಲಿ ತಕ್ಷಣ ಎಚ್ಚೆತ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ ಒಟ್ಟು 3,548 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದವು. 341 ಪ್ರಕರಣಗಳಲ್ಲಿ ಪಾಸಿಟಿವ್ ಬಂದಿದೆ. ಈ ಅವಧಿಯಲ್ಲಿ 491 ಮಂಗಗಳು ಸತ್ತಿದ್ದವು. 21 ಪ್ರಕರಣಗಳಲ್ಲಿದೃಢಪಟ್ಟದೆಎಂದು ಡಾ.ಕಿರಣ್ ಅವರು ಮಾಹಿತಿ ನೀಡಿದರು.

ನಿಫಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ:

ನೆರೆಯ ಕೇರಳದಲ್ಲಿ ಶಂಕಿತ ನಿಫಾ ವೈರಸ್ ಕಂಡು ಬಂದಿದೆ. ಜಿಲ್ಲೆಯಲ್ಲೂ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ವೈರಸ್ ಸಾಮಾನ್ಯವಾಗಿ ಬಾವಲಿ ಮೂಲಕ ಹರಡುವ ಸಾಧ್ಯತೆ ಇದೆ. 10ಕ್ಕಿಂತ ಹೆಚ್ಚಿನ ಬಾವಲಿಗಳು ಸತ್ತು ಬಿದ್ದಿರುವುದು ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು. ಕೇರಳದೊಂದಿಗೆ ಸಂಪರ್ಕ ಹೊಂದಿರುವವರಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ನಿಗಾವಹಿಸಬೇಕುಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಡಾ.ಶಂಕರಪ್ಪ, ಹೆಚ್ಚುವರಿ ಎಸ್‌ಪಿ ಡಾ.ಎಚ್.ಟಿ.ಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.