ಶಿವಮೊಗ್ಗ: ರಾಜ್ಯದಲ್ಲಿ ಆರ್.ಎಸ್.ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಆರ್.ಎಸ್.ಎಸ್ ಸಂಘಟನೆಯು ಕೋಮು ಪ್ರಚೋದನೆ ನೀಡುತ್ತಾ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ.ಇಂತಹ ಸಂಘಟನೆಯ ಚಟುವಟಿಕೆ ನಿರ್ಬಂಧಿಸಬೇಕೆಂದು ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಜಾಗದಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳ ರಾಜ್ಯ ಸರ್ಕಾರ ನಿರ್ಬಂಧಿಸುವುದನ್ನು ಸಹಿಸಿಕೊಳ್ಳಲಾಗದ ಕೆಲವರು ಸಚಿವರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಬೆದರಿಕೆ ಹಾಕುತ್ತಿದ್ದಾರೆ. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಆತಂಕಕಾರಿ ಸಂಗತಿ ಎಂದರು.
ರಾಜ್ಯದಲ್ಲಿ ಉನ್ನತ ಸಚಿವರಿಗೆ ಈ ರೀತಿಯ ಬೆದರಿಕೆ ಕರೆಗಳು ಬಂದರೆ, ಜನಸಾಮಾನ್ಯರ ಗತಿಯೇನು? ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಂದಿರುವ ಬೆದರಿಕೆ ಕರೆ, ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡುತ್ತಿರುವವರ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳ ಬಂಧಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇನ್ನಷ್ಟು ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಮುಖಂಡರಾದ ಎಚ್.ಸಿ.ಯೋಗೇಶ್, ಜವಳಿ ಹಾಗೂ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಗೌಡ, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಧೀರರಾಜ್ ಹೊನ್ನವಿಲೆ, ಅಕ್ಬರ್, ಹುಸೇನ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರ್ಷಿತ್, ನಗರ ಘಟಕದ ಅಧ್ಯಕ್ಷ ಚರಣ್, ಗ್ರಾಮಾಂತರ ಘಟಕದ ಅಧ್ಯಕ್ಷ ಪ್ರವೀಣ್, ಬ್ಲಾಕ್ ಅಧ್ಯಕ್ಷ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಆಕಾಶ್, ಅನಿಲ್ ಸಿ.ಪಾಟೀಲ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವೈಫಲ್ಯ ಮರೆಮಾಚಲು ಆರ್‌ಎಸ್‌ಎಸ್ ಟೀಕೆ
ಶಿವಮೊಗ್ಗ : ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಆರ್‌ಎಸ್‌ಎಸ್ ಸಂಘಟನೆಯ ಹೆಸರು ಬಳಸಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಆರೋಪಿಸಿದ್ದಾರೆ. ಅಧಿಕಾರ ಹಂಚಿಕೆ ಮುಖ್ಯಮಂತ್ರಿಯ ಬದಲಾವಣೆ ಸಚಿವ ಸಂಪುಟ ವಿಸ್ತರಣೆ ಸಚಿವರ ರಾಜೀನಾಮೆ ಕ್ಷೇತ್ರ ಅಭಿವೃದ್ಧಿಗೆ ಮತ್ತು ಶಾಸಕರ ನಿಧಿಗೆ ಯಾವುದೇ ಅನುದಾನ ನೀಡದೆ ಇರುವುದು ಹಾಗೂ ಇತ್ತೀಚೆಗೆ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿನ ತೊಡಕುಗಳು ಹೀಗೆ ನಿರಂತರ ಸರ್ಕಾರದ ಎಡವಟ್ಟುಗಳನ್ನು ಮರೆಮಾಚಲು ಮೇಲ್ನೋಟಕ್ಕೆ ಆರ್‌ಎಸ್‌ಎಸ್‌ನ್ನು ಗುರಿಮಾಡಿ ವಿಷಯಾಂತರ ಮಾಡಲು ಹೊರಟಿರುವುದು ಕಂಡು ಬರುತ್ತಿದೆ. ರಾಜ್ಯ ಸರ್ಕಾರ ಯಾವುದೇ ನಿರ್ಬಂಧಗಳ ಹೇರಿ ಆರ್‌ಎಸ್‌ಎಸ್ ಸಂಘಟನೆಯನ್ನು ತಡೆಯಲು ಸಾಧ್ಯವಿಲ್ಲ. ಸಂಘದ 1.29 ಲಕ್ಷಕ್ಕೂ ಹೆಚ್ಚು ಶಾಖೆಗಳ ಮೂಲಕ ಸೇವಾ ಕಾರ್ಯಗಳನ್ನು ನಿರಂತರವಾಗಿ ಇಡೀ ರಾಷ್ಟ್ರದಲ್ಲಿ ಮಾಡಿಕೊಂಡು ಬರುತ್ತದೆ. ಭಾರತದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಲ್ಲಿ ಹಲವು ಕಡೆ ಶಾಖೆಗಳ ನಡೆಸುತ್ತಿದೆ. ಕಾಂಗ್ರೆಸ್‌ನವರು ತಮ್ಮ ದುರಾಡಳಿತ ಹಾಗೂ ಭ್ರಷ್ಟಾಚಾರ ಮರೆಮಾಚುವುದಕ್ಕೆ ಈ ಕೆಲಸಕ್ಕೆ ಕೈಹಾಕಿರೋದು ದೌರ್ಭಾಗ್ಯ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.