ADVERTISEMENT

ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ: ಶಾಸಕ ಚನ್ನಬಸಪ್ಪ

ಸರ್ಕಾರಿ ಪ್ರಥಮದರ್ಜೆ ಕಾಲೇಜು: ಕೃತಕ ಬುದ್ಧಿಮತ್ತೆ, ಡಿಜಿಟಲ್ ವೇದಿಕೆ ಕುರಿತ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:28 IST
Last Updated 20 ಜುಲೈ 2025, 6:28 IST
ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ವಿಚಾರ ಸಂಕಿರಣವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು
ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ವಿಚಾರ ಸಂಕಿರಣವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು   

ಶಿವಮೊಗ್ಗ: ಜ್ಞಾನಾರ್ಜನೆ ನಿರಂತರವಾದುದು. ದೇಶದ ಅಭಿವೃದ್ಧಿ ನಿಂತಿರುವುದು ಜ್ಞಾನ ಸಾಮರ್ಥ್ಯದಿಂದ. ಪ್ರಪಂಚದ ಎದುರು ಭಾರತ ಮುಂಚೂಣಿ ದೇಶವಾಗಲು ಸಾಧ್ಯವಾಗಿದ್ದು ಇಲ್ಲಿನ ಜ್ಞಾನ–ಕೌಶಲಗಳಿಂದ ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ ಹೇಳಿದರು.

ನಗರದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ‘ಜಾಗತಿಕ ಸುಸ್ಥಿರ ಮತ್ತು ಸಮಾವೇಶಾತ್ಮಕ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ವೇದಿಕೆಗಳ ಶಕ್ತಿ ಉಪಯೋಗಿಸುವುದು’ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಕಾಲೇಜಿನಲ್ಲಿ ಇಂತಹ ವಿಚಾರ ಸಂಕಿರಣ ಆಯೋಜಿಸಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಆಧುನಿಕ ತಂತ್ರಜ್ಞಾನದ ಅರಿವು ಸಾಧ್ಯವಾಗಿದೆ ಎಂದರು.

ADVERTISEMENT

ಕೃತಕ ಬುದ್ಧಿಮತ್ತೆಯು ಮನುಷ್ಯನ ಬುದ್ಧಿವಂತಿಕೆಯನ್ನು ಯಂತ್ರಗಳಿಗೆ ಕಲಿಸುವ ವಿಧಾನವಾಗಿದೆ. ಕೃತಕವಾಗಿ ನಿರ್ಧಾರಗಳನ್ನು, ಸಮಸ್ಯೆ ಪರಿಹಾರ, ಭಾಷೆಯನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ವಿಧಾನ ಇಲ್ಲಿದೆ ಎಂದು ದಿಕ್ಸೂಚಿ ಭಾಷಣ ಮಾಡಿದ ಕುವೈಟ್ ದೇಶದ ಮಸ್ಕತ್ ವಿ.ವಿ ಸಹ ಪ್ರಾಧ್ಯಾಪಕ ಸಂತೋಷ ಕುಮಾರ್ ಹೇಳಿದರು.

‘ಕೃಷಿ, ಆಟೊಮೊಬೈಲ್, ಪ್ರವಾಸೋದ್ಯಮ, ಬ್ಯಾಂಕಿಂಗ್, ಶಿಕ್ಷಣ ಕ್ಷೇತ್ರದಲ್ಲಿ ಇದನ್ನು ಸಮರ್ಥವಾಗಿ ಬಳಸಲಾಗುತ್ತದೆ. ನಮ್ಮ ಭಾವನೆಗಳನ್ನು ಕೃತಕ ಬುದ್ಧಿಮತ್ತೆಗೆ ಅಳವಡಿಸಿದರೆ ಅದು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಯಕ್ಷಪ್ರಶ್ನೆ. ಡ್ರೋನ್, ರೊಬೊಟ್‌ಗಳನ್ನು ಕೃಷಿಯಲ್ಲಿ ಬಳಸುವುದರಿಂದ ಉತ್ಪಾದನೆ ಹೆಚ್ಚಿಸಬಹುದು. ಭೂಮಿಯ ಆಳದಲ್ಲಿ ನೀರಿನ ಗುಣಮಟ್ಟ ಅಳೆಯಲು ಸಾಧ್ಯ’ ಎಂದು ವಿವರಿಸಿದರು.  

ವಾಣಿಜ್ಯ ವಿಭಾಗದ ಮುಖ್ಯಸ್ಥ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಇರಾಕ್‌ನ ಟಿಸ್ಕ್ ಇಂಟರ್‌ನ್ಯಾಷನಲ್ ವಿ.ವಿ ಪ್ರಾಧ್ಯಾಪಕ ಗೌಸಿಯ ಖಾಟೂನ್, ಬೆಂಗಳೂರಿನ ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮಹಮ್ಮದ್ ಫಾರೂಕ್ ಪಾಷ ಆಶಯ ಭಾಷಣ ಮಾಡಿದರು. ಪ್ರಾಂಶುಪಾಲ ಬಿ.ಜಿ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐ.ಕ್ಯು.ಎ.ಸಿ ಸಂಚಾಲಕಿ ವಿದ್ಯಾಮರಿಯ ಜೋಸೆಫ್ ಉಪಸ್ಥಿತರಿದ್ದರು.

ವೇಗವಾಗಿ ಬೆಳೆಯುತ್ತಿರುವ ಡಿಜಿಟಲೀಕರಣ ಜಗತ್ತಿನ ಪರಿಚಯದ ಜೊತೆಗೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ.
ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ   
ಜಗತ್ತು ವೇಗವಾಗಿ ಬೆಳೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ ಬಳಸುವುದರಿಂದ ಮಾನವನ ಶ್ರಮ ಕಡಿಮೆಯಾಗಿದೆ.
ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.