ADVERTISEMENT

ಕೋವಿಡ್‌ ಸಾವು: 1,064 ಕುಟುಂಬಗಳಿಗೆ ನೆರವು

ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ₹ 1.50 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 4:43 IST
Last Updated 14 ಅಕ್ಟೋಬರ್ 2021, 4:43 IST

ಶಿವಮೊಗ್ಗ: ಕೋವಿಡ್‌ನಿಂದ ಮೃತಪಟ್ಟ 1,064 ಜನರ ಕುಟುಂಬಗಳಿಗೆ ಮೊದಲ ಹಂತದಲ್ಲಿ ಸರ್ಕಾರ ಘೋಷಿಸಿರುವ ಆರ್ಥಿಕ ನೆರವು ತಲುಪಿಸಲು ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್‍ನಿಂದ ಮೃತರಾದ ವ್ಯಕ್ತಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಮೃತರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸುವವರೆಗೆ ಕಾಯಬಾರದು. ಕಂದಾಯ ಇಲಾಖೆಯ ಅಧಿಕಾರಿಗಳು ಮೃತಪಟ್ಟವರ ಮನೆಗೆ ಭೇಟಿ ನೀಡಬೇಕು. ಕುಟುಂಬದವರಿಂದ ಅರ್ಜಿ, ಮಾಹಿತಿ ಪಡೆದು ಅಪ್‌ಲೋಡ್‌ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಮೃತರ ಕುಟುಂಬ ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ತಲಾ ₹ 1.50 ಲಕ್ಷ ನೆರವು ದೊರೆಯಲಿದೆ. ಈ ತಿಂಗಳ ಅಂತ್ಯದ ಒಳಗೆ ಮಾಹಿತಿ ಸಂಗ್ರಹಿಸಿ, ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಬೇಕು. ಆನ್‍ಲೈನ್‍ನಲ್ಲಿ ಮಾಹಿತಿ ತುಂಬಲು ತಾಂತ್ರಿಕ ಸಮಸ್ಯೆಗಳು ಎದುರಾದರೆ ಆರೋಗ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಮೃತ ವ್ಯಕ್ತಿ ಹೊರಗಿನ ಜಿಲ್ಲೆಯವರಾಗಿದ್ದರೆ ಅವರ ಕುಟುಂಬದವರು ಮೂಲ ಜಿಲ್ಲೆಯಲ್ಲೇ ಅರ್ಜಿ ಸಲ್ಲಿಸಬೇಕು ಎಂದರು.

ಕೋವಿಡ್ ನಿಯಂತ್ರಣ ಕಾರ್ಯಕ್ರಮ ಹಾಗೂ ಚಟುವಟಿಕೆಗೆ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಅನುದಾನದ ಖರ್ಚು-ವೆಚ್ಚಗಳ ಮಾಹಿತಿ ನೀಡಬೇಕು. ಕೊರತೆಯಾದರೆ ಉಳಿದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಹಶೀಲ್ದಾರರು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಜಾತಿ ಪ್ರಮಾಣಪತ್ರ ನೀಡಬೇಕು. ಈಗಾಗಲೇ ಇತರೆ ತಾಲ್ಲೂಕುಗಳಲ್ಲಿ ನೀಡಲಾಗಿರುವ ಸುಳ್ಳು ಪ್ರಮಾಣಪತ್ರಗಳ ಕುರಿತು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ 7 ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಕಚೇರಿಯ ದಾಖಲೆಯಲ್ಲೂ ರದ್ದುಗೊಳಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೆ.ನಾಗರಾಜ್, ಆರ್.ಸಿ.ಎಚ್.ಅಧಿಕಾರಿ ಡಾ.ನಾಗರಾಜ್‍ ನಾಯ್ಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.