ADVERTISEMENT

ತೀರ್ಥಹಳ್ಳಿ ವೈದ್ಯರಿಂದ ಕೋವಿಡ್‌ ವಿವರ ಪಡೆದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 2:57 IST
Last Updated 16 ಮೇ 2021, 2:57 IST

ತೀರ್ಥಹಳ್ಳಿ: ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿ ಕ10 ವರ್ಷಗಳಿಂದ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗಣೇಶ್ ಭಟ್ ಅವರ ಜತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ವಿಡಿಯೊ ಸಂವಾದದ ಮೂಲಕ ಕೋವಿಡ್ ನಿರ್ವಹಣೆಯ ಮಾಹಿತಿ ಪಡೆದರು.

ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವ
ಹಿಸುತ್ತಿರುವ ರಾಜ್ಯದ ಆಯ್ದ 11 ಮಂದಿ ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಅವರು ವಿಡಿಯೊ ಸಂವಾದ ನಡೆಸಿದರು. ತಜ್ಞ ವೈದ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮುಖ್ಯಮಂತ್ರಿ ಅವರೊಂದಿಗೆ ಹಂಚಿಕೊಂಡು ಸಲಹೆ, ಸೂಚನೆ ನೀಡಿದರು.

ತೀರ್ಥಹಳ್ಳಿ ತಾಲ್ಲೂಕು ಪೂರ್ಣ ಮಲೆನಾಡು ಪ್ರದೇಶ. ಅಲ್ಲಿನ ಗ್ರಾಮೀಣ ಭಾಗದ ಪರಿಸ್ಥಿತಿ, ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಲು ಇರುವ ಆಂಬುಲೆನ್ಸ್ ವ್ಯವಸ್ಥೆ, ಲಸಿಕೆ ನೀಡಿದ ವಿವರ, ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ವ್ಯವಸ್ಥೆ ಕುರಿತು ಮುಖ್ಯಮಂತ್ರಿ ಮಾಹಿತಿ ಕೇಳಿದರು.

ADVERTISEMENT

‘100 ಹಾಸಿಗೆಗಳ ಆಸ್ಪತ್ರೆಯಲ್ಲಿ 50 ಹಾಸಿಗೆ ಕೋವಿಡ್‌ ರೋಗಿಗಳಿಗೆ ಮೀಸಲಿರಿಸಲಾಗಿದೆ. 47 ಪಾಸಿಟಿವ್ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಆಮ್ಲಜನಕ ಪಡೆಯುತ್ತಿದ್ದಾರೆ. ಪ್ರತಿ ದಿನ ಸಂಜೆ ತಾಲ್ಲೂಕು ವೈದ್ಯಾಧಿಕಾರಿಗಳು, ತಹಶೀಲ್ದಾರ್, ಶಾಸಕರು ಸಭೆ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಪರಿಶೀಲನೆ ನಡೆಸುತ್ತೇವೆ. ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ವ್ಯವಸ್ಥೆ ಉತ್ತಮಪಡಿಸಲು ಸಾಧ್ಯವಾಗಿದೆ’ ಎಂದು ಗಣೇಶ್ ಭಟ್‌ ವಿವರ ನೀಡಿದರು.

‘ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಲು ಎರಡು ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಲ್ಕು ಗ್ರಾಮೀಣ ಪ್ರದೇಶದಿಂದ ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬರಲು ಬಳಸುತ್ತಿದ್ದೇವೆ. ಟೆಲಿಮೆಡಿಸಿನ್ ಸೌಲಭ್ಯ ಆರಂಭಿಸಲಾಗಿದೆ. ಮೂರು ಮಂದಿ ವೈದ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಂ ಐಸೋಲೇಷನ್‌ನಲ್ಲಿ ಇರುವವರು ಇದರ ಸೌಲಭ್ಯ ಪಡೆಯುತ್ತಿದ್ದಾರೆ. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿದ್ದು, ಎರಡನೇ ಲಸಿಕೆ ಮಾತ್ರ ನೀಡುತ್ತಿದ್ದೇವೆ’ ಎಂದರು.

ವೈದ್ಯರ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ, ‘ಎರಡನೇ ಅಲೆ ನಿರೀಕ್ಷೆಗೂ ಮೀರಿ ತೀವ್ರಗೊಂಡಿದೆ. ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಮಾನವೀಯತೆಯ ನೆಲೆಯಲ್ಲಿ ಎಲ್ಲ ಸಿಬ್ಬಂದಿ ಸಮರ್ಥವಾಗಿ ಎದುರಿಸುತ್ತಿರುವುದು ಶ್ಲಾಘನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.