ADVERTISEMENT

ಕೆಪಿಸಿ ಸಾಗುವಳಿ ಜಮೀನು ಮಂಜೂರಾತಿಗೆ ಆಗ್ರಹ

ತುಮರಿ: ಅ.30 ರಂದು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:39 IST
Last Updated 25 ಅಕ್ಟೋಬರ್ 2025, 6:39 IST
ಕೆಪಿಸಿಗೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ಮಂಜೂರು ಮಾಡುವಂತೆ ತುಮರಿಯಲ್ಲಿ ಗುರುವಾರ ರೈತರು ಆಗ್ರಹಿಸಿದರು
ಕೆಪಿಸಿಗೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ಮಂಜೂರು ಮಾಡುವಂತೆ ತುಮರಿಯಲ್ಲಿ ಗುರುವಾರ ರೈತರು ಆಗ್ರಹಿಸಿದರು   

ತುಮರಿ: ಮಡೆನೂರು, ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಮುಳುಗಡೆಯಾಗಿ, ಕೆಪಿಸಿ (ಕರ್ನಾಟಕ ವಿದ್ಯುತ್ ನಿಗಮ) ಅಡಿಯಲ್ಲಿರುವ ಉಳಿಕೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸರ್ಕಾರ ತಕ್ಷಣ ಭೂ ಒಡೆತನದ ಹಕ್ಕು ನೀಡಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ.ನಾ. ಶ್ರೀನಿವಾಸ್ ಆಗ್ರಹಿಸಿದರು.

ಮಲೆನಾಡಿನ ರೈತರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕೈಗೊಳ್ಳಬೇಕಾದ ಹೋರಾಟದ ರೂಪುರೇಷೆ ಕುರಿತು ಕರೂರು ಹೋಬಳಿಯ ತುಮರಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಯಾವುದೇ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡ 5 ವರ್ಷದೊಳಗೆ ಅದನ್ನು ಬಳಕೆ ಮಾಡದಿದ್ದಲ್ಲಿ, ಅದರ ಮಾಲೀಕ ಅಥವಾ ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಭೂಸ್ವಾಧೀನ ಕಾಯ್ದೆ ಹೇಳುತ್ತದೆ. ಆದರೆ ಆಣೆಕಟ್ಟು ನಿರ್ಮಾಣವಾಗಿ 65 ವರ್ಷಗಳು ಕಳೆದರೂ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರ ವಿಫಲವಾಗಿದೆ. ಇದನ್ನು ಖಂಡಿಸಿ, ಅಕ್ಟೋಬರ್ 30ರಂದು ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.

ADVERTISEMENT

‘ಅರಣ್ಯ ಇಲಾಖೆ ಅಧಿಕಾರಿಗಳು ಕರೂರು, ಬಾರಂಗಿ ಹೋಬಳಿಯ ಪ್ರದೇಶವನ್ನು ಶರಾವತಿ ಸಿಂಗಳೀಕ ಅಭಯಾರಣ್ಯವಾಗಿ ಘೋಷಿಸುವ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿಗಳ ಅಭಿಪ್ರಾಯ ಪಡೆಯದೇ ಅಭಯಾರಣ್ಯ ವ್ಯಾಪ್ತಿಯೊಳಗೆ ತರಲಾಗಿದೆ. ಆ ಜಾಗದಲ್ಲಿ ರೈತರು ಸಾಗುವಳಿ ಮಾಡುತ್ತಿರುವುದು ಜಮೀನುಗಳು ಹಾಗೂ ಊರುಗಳನ್ನೂ ಗಮನಿಸದೆ ಕಚೇರಿಯಲ್ಲಿ ಕುಳಿತು ನಕ್ಷೆ ತಯಾರಿಸಲಾಗಿದೆ. 30 ವರ್ಷಗಳ ಹಿಂದೆ ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಭೂಮಿಯನ್ನು ತೆರವು ಮಾಡುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಎರಡು–ಮೂರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಅನ್ಯಾಯವಾಗಲಿದೆ’ ಎಂದು ಕೆಪಿಸಿ ಸಾಗುವಳಿದಾರ ಬಿ.ಆರ್. ಅಶೋಕ್ ಹೇಳಿದರು.

‘ಬಾನುಕುಳಿ ಸಮೀಪದ ಉರುಳುಗಲ್ಲು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರಗಳು ಮುಂದಾಗಿಲ್ಲ. ಆದರೆ ಪ್ರಭಾವಿ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯನ್ನು ಕಡಿತ ಗೊಳಿಸಲು ಒಪ್ಪಿಗೆ ನೀಡಿರುವುದು ಕೇಂದ್ರ, ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಿರುವ ರೈತರ ಮೇಲೆ ಯಾವುದೇ ಕಾರಣಕ್ಕೂ ಪ್ರಕರಣ ದಾಖಲಿಸಬಾರದು ಎಂದು ಹಲವು ಬಾರಿ ಸರ್ಕಾರ ನಿರ್ದೇಶನ ನೀಡಿದೆ. ಆದರೆ, ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪಾಲಿಸದೆ ನಿರಂತರವಾಗಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಹೆಚ್ಚುತ್ತಿದೆ. ಬಗರ್ ಹುಕುಂ ನಮೂನೆ 50, 53, 57ರಲ್ಲಿ ಅರ್ಜಿ ಹಾಕಿದವರು ಅರಣ್ಯ, ಗೋಮಾಳ, ಕಂದಾಯ ಭೂಮಿ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಇಚ್ಛಾಶಕ್ತಿ ತೋರಬೇಕು ಎಂದು ಆಗ್ರಹಿಸಿದರು.

ಈ ವೇಳೆ ಅಶೋಕ್ ಜಂಬಳ್ಳಿ, ಲೋಕಣ್ಣ, ಅ.ನಾ. ಚಂದ್ರಶೇಖರ್, ಅಶೋಕ ಕೊಡಸರ, ಚಕ್ರಪಾಣಿ ಭಟ್, ಅರುಣ್ ಕರೂರು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.