ADVERTISEMENT

ಆನವಟ್ಟಿ: ‘ಚಿನ್ನ’ದ ಕೆಲಸದ ಜೊತೆಗೆ ‘ಮಣ್ಣಿನ’ ಪ್ರೀತಿ

ತೋಟದ ಸುತ್ತ ಬಗೆಬಗೆಯ ಹಣ್ಣಿನ ಗಿಡ ಬೆಳೆದಿರುವ ಅರುಣ್‌

ರವಿ ಆರ್.ತಿಮ್ಮಾಪುರ
Published 13 ಜುಲೈ 2022, 3:06 IST
Last Updated 13 ಜುಲೈ 2022, 3:06 IST
ಲಕ್ಕವಳ್ಳಿಯಲ್ಲಿರುವ ತೋಟದ ಹಲಸಿನ ಹಣ್ಣಿನ ಮರದೊಂದಿಗೆ ಕೃಷಿಕ ಅರಣ ವಿ.ರೇವಣಕರ್ ಹಾಗೂ ಕುಟುಂಬದವರು
ಲಕ್ಕವಳ್ಳಿಯಲ್ಲಿರುವ ತೋಟದ ಹಲಸಿನ ಹಣ್ಣಿನ ಮರದೊಂದಿಗೆ ಕೃಷಿಕ ಅರಣ ವಿ.ರೇವಣಕರ್ ಹಾಗೂ ಕುಟುಂಬದವರು   

ಆನವಟ್ಟಿ: ಚಿನ್ನದ ಕುಸುರಿ ಕೆಲಸ ಮಾಡುವ ಜೊತೆಗೆ ಸಮಗ್ರ ಕೃಷಿಯ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ಆನವಟ್ಟಿಯ ರೈತ ಅರುಣ ವಿ.ರೇವಣಕರ್, ಅಂತರಬೆಳೆ ಕೃಷಿ, ಹೈನುಗಾರಿಕೆ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ.

ವಿನಾಯಕ ರೇವಣಕರ್ ಅವರ ಮೂವರು ಮಕ್ಕಳ ಪೈಕಿ ಮಂಜುನಾಥ, ನಾಗೇಶ್ ಚಿನ್ನದ ಕೆಲಸದಲ್ಲಿ ಆಸಕ್ತಿ ಹೊಂದಿದ್ದರೆ, ಕಿರಿಯ ಮಗ ಅರುಣ್‌ ಅಕ್ಕಸಾಲಿಗ ವೃತ್ತಿಯ ಜೊತೆಗೆ ಕೃಷಿ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ.

ಲಕ್ಕವಳ್ಳಿ ಹಾಗೂ ವಿಟ್ಲಾಪುರದಲ್ಲಿರುವ 9 ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆದಿರುವ ಅವರು, ತೋಟದ ಸುತ್ತಲೂ ಹಲಸು, ಜಂಬುನೇರಳೆ, ಬೆಟ್ಟದ ನೆಲ್ಲಿಕಾಯಿ, ಪಪ್ಪಾಯ, ಮಾವು, ಬಿಂಬಲಕಾಯಿ, ಗಜನಿಂಬೆ, ದಡ್ಲಿಕಾಯಿ, ಪೇರಲ, ನಿಂಬೆ, ಬೇರ್ ಹಲಸು, ಮೋಸಂಬೆ, ಅಂಜೂರ, ಪನ್ನೇರಲೆ, ಸಪೋಟ ಸೇರಿ ಹಲವಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸುವ ಜೊತೆಗೆ ಹೂವಿನ ಗಿಡಗಳನ್ನೂ ಬೆಳೆಸಿ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ.

ADVERTISEMENT

ಕೈಬಿಟ್ಟ ಜಮೀನು ಕೈಹಿಡಿಯಿತು: ‘ಕೃಷಿಯಿಂದ ಲಾಭಗಳಿಸಬೇಕು ಎಂಬ ಉದ್ದೇಶದಿಂದ ಲಕ್ಕವಳ್ಳಿಯಲ್ಲಿ 6 ಎಕರೆ ಜಮೀನು ಖರೀದಿಸಿದ್ದೆ. ತಗ್ಗು ಇರುವ ಕಾರಣ 2,000 ಟ್ರ್ಯಾಕ್ಟರ್ ಮಣ್ಣು ತುಂಬಿಸಿ, ಸಮತಟ್ಟು ಮಾಡಿ, ಕೃಷಿ ಕೆಲಸ ಆರಂಭಿಸಿದೆ. ಅಡಿಕೆ ಜೊತೆಗೆ ಅಂತರ ಬೆಳೆಯಾಗಿ ಶುಂಠಿ, ಬಾಳೆ ಬೆಳೆದು ಲಾಭ ಗಳಿಸಿದೆ.
ಜಮೀನು ನನ್ನ ಕೈಬಿಡಲಿಲ್ಲ’ ಎಂದು ಅವರು ಹೇಳಿದರು.

ಚಿಕ್ಕಂದಿನಿಂದಲೇ ಟೊಮೆಟೊ ಮತ್ತಿತರ ತರಕಾರಿ ಗಿಡಗಳನ್ನು ಮನೆ ಮುಂದೆ ಬೆಳೆಸುತ್ತಿದ್ದೆ. ಪ್ರಾಣಿ, ಪಕ್ಷಿ, ಪರಿಸರದ ಬಗ್ಗೆ ಆಸಕ್ತಿ ಇತ್ತು. ನರ್ಸರಿಗಳಿಗೆ ಭೇಟಿ ನೀಡಿ ಹಣ್ಣಿನ ಗಿಡಗಳನ್ನು ಹೇಗೆ ಬೆಳೆಸಿದ್ದಾರೆ ಎಂದು ಗಮನಿಸಿ, ಮಾಹಿತಿ ಪಡೆದು ಗಿಡ ತಂದು ತೋಟದಲ್ಲಿ ಬೆಳೆಸುತ್ತೇನೆ. ಎಲ್ಲ ಗಿಡಗಳೂ ಉತ್ತಮ ಫಸಲು ನೀಡುತ್ತಿವೆ ಎಂದು ಅವರು ತಿಳಿಸಿದರು.

‘ತೋಟದಲ್ಲಿ ಬೆಳೆದಿರುವ ಹಣ್ಣುಗಳನ್ನು ಮಾರಾಟ ಮಾಡುವುದಿಲ್ಲ. ಕುಟುಂಬದವರಿಗೆ, ಸ್ನೇಹಿತರಿಗೆ, ತೋಟಕ್ಕೆ ಭೇಟಿ ನೀಡುವವರಿಗೆ ಹಂಚುತ್ತೇನೆ. ಪಕ್ಷಿಗಳಿಗೆ ಆಹಾರ ಸಿಗುವ ಜೊತೆಗೆ ನಮಗೂ ಹಣ್ಣು ಸಿಗಬೇಕು ಎಂಬ ಉದ್ದೇಶದಿಂದ ಹಣ್ಣಿನ ಗಿಡಗಳನ್ನು ಬೆಳೆಸಿದ್ದೇನೆ’ ಎಂದೂ ಅವರು ಹೇಳುತ್ತಾರೆ.

***

ಹೈನುಗಾರಿಕೆಯಲ್ಲೂ ಯಶಸ್ಸು

ತೋಟದಲ್ಲಿ ಕೋಳಿ ದೊಡ್ಡಿಗಳನ್ನು ನಿರ್ಮಾಣ ಮಾಡಿ, ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡಿರುವ ಜೊತೆಗೆ ಹಸು ಹಾಗೂ ಕುರಿಗಳನ್ನು ಸಾಕಿದ್ದಾರೆ. ಈ ಹಿಂದೆ ಪ್ರಯೋಗಿಕವಾಗಿ ಜೇನು ಸಾಕಣೆಯನ್ನೂ ಮಾಡಿದ್ದು, ಯಶಸ್ವಿ ಆಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ನಿರ್ಧರಿಸಿದ್ದಾರೆ.

‘ಜೇನು ಸಾಕಾಣಿಕೆ, ಟರ್ಕಿ ಕೋಳಿ ಸೇರಿ ವಿವಿಧ ತಳಿಯ ಕೋಳಿ ಹಾಗೂ ಕುರಿ ಸಾಕಾಣಿಕೆಯನ್ನು ತೋಟದಲ್ಲೇ ಮನೆ ಮಾಡಿಕೊಂಡು ದೊಡ್ಡ ಪ್ರಮಾಣದಲ್ಲಿ ಮಾಡುವ ಉದ್ದೇಶವಿದೆ’ ಎಂದು ಅರುಣ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.