ಶಿವಮೊಗ್ಗ: ವೇತನ ಪರಿಷ್ಕರಣೆ ಸೇರಿದಂತೆ ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೋಮವಾರ ನಡೆದ ಸಭೆ ವಿಫಲವಾದ ಕಾರಣ ಕೆಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ.
ಹೀಗಾಗಿ ಶಿವಮೊಗ್ಗ ವಿಭಾಗದಲ್ಲೂ ಮಂಗಳವಾರ ನೌಕರರು ಕರೆಗೆ ಸ್ಪಂದಿಸಲಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದಲೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ನೌಕರರ ಸಂಘಟನೆಯ ಪ್ರತಿನಿಧಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಮಹಾದೇವು ಮಾಧ್ಯಮದವರಿಗೆ ತಿಳಿಸಿದ್ದಾರೆ. ಆದರೆ ನೌಕರರು ಬೆಂಬಲ ಕೊಟ್ಟಿಲ್ಲ. ಬಸ್‌ಗಳು ಎಂದಿನಂತೆಯೇ ಕಾರ್ಯಾಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್.ನವೀನ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸಮಿತಿಯ ಸೂಚನೆಯಂತೆ ಬೆಳಗ್ಗೆ 6 ಗಂಟೆಯಿಂದಲೇ ಹೋರಾಟ ಆರಂಭವಾಗಲಿದೆ. ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮುಷ್ಕರ ನಡೆಯಲಿದೆ. ಪ್ರಮುಖ ಮೂರು ಬೇಡಿಕೆ ಸೇರಿ ಒಟ್ಟು 12 ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಮಹಾದೇವು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳನ್ನು ಅವಲಂಬಿಸಿ ಶಾಲೆ, ಕಾಲೇಜು, ಕಚೇರಿ, ಆಸ್ಪತ್ರೆಗಳಿಗೆ ತೆರಳುವವರಿಗೆ ತೊಂದರೆ ಆಗಲಿದೆ. ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಿಗೂ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ.
ಶಿವಮೊಗ್ಗ ವಿಭಾಗದಲ್ಲಿ ನೌಕರರು ಮಂಗಳವಾರ ಕರ್ತವ್ಯಕ್ಕೆ ಬರುವುದಾಗಿ ಬುಕ್ಕಿಂಗ್ ರಿಜಿಸ್ಟರ್‌ನಲ್ಲಿ ಸಹಿ ಮಾಡಿದ್ದಾರೆ. ಬಸ್‌ಗಳು ಕಾರ್ಯಾಚರಿಸಲಿವೆ. ಪ್ರಯಾಣಿಕರಲ್ಲಿ ಗೊಂದಲ ಬೇಡ.ಟಿ.ಆರ್.ನವೀನ್ ವಿಭಾಗೀಯ ಸಾರಿಗೆ ನಿಯಂತ್ರಕರು ಕೆಎಸ್‌ಆರ್‌ಟಿಸಿ ಶಿವಮೊಗ್ಗ
- ನಿತ್ಯ 35 ಸಾವಿರ ಪ್ರಯಾಣಿಕರ ಓಡಾಟ
ಶಿವಮೊಗ್ಗ ವಿಭಾಗದಲ್ಲಿ ಒಟ್ಟು 375 ಬಸ್‌ಗಳು ನಿತ್ಯ ಕಾರ್ಯಾಚರಣೆ ನಡೆಸುತ್ತಿವೆ. ಇಲ್ಲಿನ 45 ಬಸ್‌ಗಳು ಸೇರಿ ವಿವಿಧ ವಿಭಾಗಗಳ 200 ಬಸ್ಸುಗಳು ಶಿವಮೊಗ್ಗದಿಂದ ನಿತ್ಯ ಬೆಂಗಳೂರಿಗೆ ಓಡಾಟ ನಡೆಸುತ್ತವೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಪ್ರತಿದಿನ 1190 ಬಸ್‌ಗಳು ರಾಜ್ಯ ಮತ್ತು ಹೊರ ರಾಜ್ಯಕ್ಕೆ ತೆರಳುತ್ತವೆ. ಅಂದಾಜು 3500 ಪ್ರಯಾಣಿಕರು ನಿತ್ಯ ಸಂಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.