ತೀರ್ಥಹಳ್ಳಿ: ಇಲ್ಲಿನ ಕುಪ್ಪಳಿಯ ಕವಿ ಮನೆ ಪರಿಸರದಲ್ಲಿ ಶುಕ್ರವಾರ (ಜ.24) ಮಂತ್ರ ಮಾಂಗಲ್ಯ ಪದ್ಧತಿಯಡಿ ಅದ್ದೂರಿ ವಿವಾಹ ಸಮಾರಂಭ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮದುವೆ ರಾಷ್ಟ್ರಕವಿ ಕುವೆಂಪು ಅವರ ಆಶಯಕ್ಕೆ ಧಕ್ಕೆ ತರುವಂತೆ ಆಯೋಜನೆಗೊಂಡಿತ್ತು ಎಂದು ಚಿಂತಕರು ಆರೋಪಿಸಿದ್ದಾರೆ.
ಸಾಲ ಮಾಡಿ ಮದುವೆ ಮಾಡುವುದು ಸೇರಿದಂತೆ ಜಾತಿ ಪದ್ಧತಿ, ಸ್ತ್ರೀ ಅಸಮಾನತೆ, ಅಸ್ಪೃಶ್ಯತೆ ಮೊದಲಾದ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕುವ ಉದ್ದೇಶದಿಂದ ಕುವೆಂಪು ಅವರು ಮಂತ್ರ ಮಾಂಗಲ್ಯ ವಿವಾಹ ಪದ್ಧತಿಯನ್ನು ರೂಢಿಗೆ ತಂದಿದ್ದರು. ಅದಕ್ಕೆ ಅವರ ನೆಲದಲ್ಲೇ ತಿಲಾಂಜಲಿ ಇಡಲಾಗಿದೆ. ಕುವೆಂಪು ಶತಮಾನೋತ್ಸವ ನಿಮಿತ್ತ ನಿರ್ಮಿಸಿರುವ ಹೇಮಾಂಗಣವು ಕ್ರಮೇಣ ರೆಸಾರ್ಟ್‌ನ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾಹಿತಿಯೊಬ್ಬರು ದೂರಿದ್ದಾರೆ.
ಮಂತ್ರ ಮಾಂಗಲ್ಯದಲ್ಲಿ ವಾದ್ಯ, ಓಲಗ, ಧ್ವನಿವರ್ಧಕದ ಬಳಕೆಗೆ ಅವಕಾಶವಿಲ್ಲ. ಮದುವೆಯನ್ನು ವಧು–ವರರು ಮತ್ತು ಕುಟುಂಬದವರ ಅತ್ಯಂತ ಖಾಸಗಿ ಸಂದರ್ಭವೆಂದು ಪರಿಗಣಿಸಲಾಗುತ್ತದೆ. ಆ ಕ್ಷಣವು ಅಲ್ಲಿ ಸೇರುವವರ ಆತ್ಮಾವಲೋಕನ ಮತ್ತು ಅಂತಃಸಾಕ್ಷಿಯ ಸಂದರ್ಭವಾಗಿರುತ್ತದೆ. ವಿವಾಹವು ಪ್ರಶಾಂತ ಹಾಗೂ ಗಂಭೀರ ವಾತಾವರಣದಲ್ಲಿ ನಡೆಯಬೇಕು ಎಂದು ಕುವೆಂಪು ಅವರು ತಮ್ಮ ಮಂತ್ರ ಮಾಂಗಲ್ಯ ಪುಸ್ತಕದಲ್ಲೇ ಉಲ್ಲೇಖಿಸಿದ್ದಾರೆ.
‘ಹೇಮಾಂಗಣದಲ್ಲಿ ನಡೆದ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸುತ್ತಮುತ್ತಲ ಮರಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೇ ‘ರೌಂಡ್ ಟೇಬಲ್’ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು’ ಎಂದು ಚಿಂತಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕುಪ್ಪಳಿಯಲ್ಲಿ ಈಗೀಗ ನಡೆಯುತ್ತಿರುವ ಕಾರ್ಯಕ್ರಮಗಳು ಸ್ಥಳೀಯ ಹೋಂ ಸ್ಟೇಗಳಿಗೆ ವ್ಯಾವಹಾರಿಕ ಸರಕಾಗುತ್ತಿವೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಪದಾಧಿಕಾರಿಗಳೇ ಹೋಂ ಸ್ಟೇ ನಡೆಸುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ಅದ್ದೂರಿ ಮದುವೆ ನಡೆದಿವೆ’ ಎಂದು ದೂರಿದ್ದಾರೆ.
ಮದುವೆ ನನ್ನ ಸಂಬಂಧಿಕರದ್ದೇ ಆಗಿತ್ತು. ಅನುಮತಿ ಕೊಡುವ ಮುನ್ನ ನಿಯಮದ ಬಗ್ಗೆ ಹೇಳಿದ್ದೆವು. ವಿದ್ಯುತ್ ದೀಪಾಲಂಕಾರ ಮಾಡಿದ್ದರಿಂದ ಆಡಂಬರದಂತೆ ಕಂಡಿದೆ.ಕಡಿದಾಳ್ ಪ್ರಕಾಶ್ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.