ADVERTISEMENT

ಕುರುಬ ಸಮಾಜ; ಎಸ್‌ಟಿಗೆ ಸೇರಿಸಿ ಮೀಸಲಾತಿ ಹೆಚ್ಚಿಸಿ: ಕೆ.ಎಸ್.ಈಶ್ವರಪ್ಪ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 5:41 IST
Last Updated 11 ಅಕ್ಟೋಬರ್ 2025, 5:41 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ಕುರುಬರ ಮೇಲೆ ಕಳಕಳಿ ಇದ್ದರೆ ಸಮಾಜವನ್ನು ಪರಿಶಿಷ್ಟ ಪಂಗಡಗಳ (ಎಸ್.ಟಿ) ಪಟ್ಟಿಗೆ ಸೇರಿಸಿ ಅಲ್ಲಿನ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಈಗಿರುವ ಎಸ್.ಟಿ. ಮೀಸಲಾತಿಯನ್ನು ಶೇ 20ರಷ್ಟು ಹೆಚ್ಚಿಸಿ ಅದರಲ್ಲಿ ಕುರುಬ ಸಮಾಜಕ್ಕೆ ಹಾಗೂ ಇನ್ನಿತರೆ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ಒದಗಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. 

‘ಕುರುಬರಿಗೆ ಎಸ್‌.ಟಿ ಮೀಸಲಾತಿ ಕಲ್ಪಿಸಲು ಹೋರಾಟ ಮಾಡಿದ್ದು ನಾನಲ್ಲ. ಕೆ.ಎಸ್.ಈಶ್ವರಪ್ಪ ಅವರ ಹೋರಾಟದಿಂದ ಬೊಮ್ಮಾಯಿ ನೇತೃತ್ವದ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸತ್ಯ ಅರಿತು ಮಾತನಾಡಿದ್ದಕ್ಕೆ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದರು. 

ADVERTISEMENT

ಕುರುಬ ಸಮಾಜವನ್ನು ಎಸ್.ಸಿ ವರ್ಗಕ್ಕೆ ಸೇರಿಸಬೇಕೆಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಸಿದ ಹೋರಾಟದ ಫಲವಾಗಿ ತಜ್ಞರ ಸಮಿತಿಯು ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಹೇಳಿದರು. 

ಅಧ್ಯಯನದಲ್ಲಿ ಕುರುಬ ಸಮಾಜ ಈ ದೇಶದ ಮೂಲ ನಿವಾಸಿಗಳೆಂದು, ಇವರಲ್ಲಿ ಹಲವರು ಕಡು ಬಡವರು, ತುಳಿತಕ್ಕೊಳಗಾದ ಜನರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಸಮಾಜ ಅತ್ಯಂತ ಹಿಂದುಳಿದ ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ ಎಂದು ವಿವರಿಸಿದರು.

‘ನಮ್ಮ ಹೋರಾಟ ಯಾವುದೇ ಒಂದು ಜಾತಿಯ ವಿರುದ್ಧವಾಗಲಿ, ಸಮಾಜದ ವಿರುದ್ಧವಾಗಲಿ ಅಲ್ಲ. ಹಿಂದೂ ಸಮಾಜದ ಕಡು ಬಡವನಿಗೂ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ಮುಂದುವರೆಯುತ್ತದೆ’ ಎಂದರು. 

ಮಹಾಲಿಂಗಯ್ಯ ಶಾಸ್ತ್ರಿ, ಇ.ವಿಶ್ವಾಸ್, ಉಮೇಶ್ ಆರಾಧ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.