ADVERTISEMENT

ಕುವೆಂಪುರದ್ದು ಧರ್ಮಗ್ರಂಥ ಮೀರಿದ ಸಾಹಿತ್ಯ: ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ

ಕವಲೇದುರ್ಗದ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 5:02 IST
Last Updated 21 ಏಪ್ರಿಲ್ 2022, 5:02 IST
ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಸೌಹಾರ್ದ ಇಫ್ತಾರ್‌ ಕಾರ್ಯಕ್ರಮದಲ್ಲಿ ಕವಲೇದುರ್ಗದ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಮೌಲಾನಾ ಅಬೂಬಕ್ಕರ್‌ ಸಿದ್ದಿಕ್‌, ಫಾದರ್‌ ವಿಲಿಯಂ ವಿನ್ನಿಫ್ರೆಡ್‌ ಇದ್ದರು.
ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಸೌಹಾರ್ದ ಇಫ್ತಾರ್‌ ಕಾರ್ಯಕ್ರಮದಲ್ಲಿ ಕವಲೇದುರ್ಗದ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಮೌಲಾನಾ ಅಬೂಬಕ್ಕರ್‌ ಸಿದ್ದಿಕ್‌, ಫಾದರ್‌ ವಿಲಿಯಂ ವಿನ್ನಿಫ್ರೆಡ್‌ ಇದ್ದರು.   

ತೀರ್ಥಹಳ್ಳಿ: ಕನ್ನಡದ ಉಳಿವಿಗಾಗಿ ಹೋರಾಡುವ ಬದಲು ಕನ್ನಡವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಭಾರತ ಸರ್ವಧರ್ಮದ ಶಾಂತಿಯ ತೋಟ. ಎಲ್ಲಾ ಧರ್ಮಗ್ರಂಥಗಳನ್ನು ಮೀರಿದ ಸಾಹಿತ್ಯವನ್ನು ಕುವೆಂಪು ನೀಡಿದ್ದಾರೆ ಎಂದು ಕವಲೇದುರ್ಗದ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಗಣಪತಿ ಬಡಾವಣೆಯ ಕೆಬಿಎಸ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ವ ಧರ್ಮೀಯರ ಸೌಹಾರ್ದ ರಂಜಾನ್‌ ಇಫ್ತಾರ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಮರಸ್ಯದಿಂದ ಅನನ್ಯವಾಗಿ ಬದುಕುವ ಬಗ್ಗೆ ಎಲ್ಲರೂ ಯೋಚಿಸಬೇಕು. ಮಾನವ ಜನ್ಮ 84 ಲಕ್ಷಜೀವರಾಶಿಗಳಲ್ಲಿಯೇ ಶೇಷ್ಠವಾಗಿದೆ. ದೇವತಾ ಮನುಷ್ಯರು, ಮಹಮದೀಯರು, ಸಂತರು, ಶಿವಯೋಗಿಗಳು, ದಾಸರು, ಸಜ್ಜನರು, ಸೂಫಿ ಸಂತರು ಮಹಾತ್ಮರು. ನಮ್ಮೊಳಗಿನ ಅಂತಃಕರಣವನ್ನು ಪ್ರಬುದ್ಧವಾಗಿಸಿಕೊಳ್ಳಬೇಕು’ ಎಂದರು.

ADVERTISEMENT

ಮೌಲಾನ ಅಬ್ದುಲ್ಲಾ ಶರೀಫ್‌ ಮಾತನಾಡಿ, ‘ಸಂಘರ್ಷಗಳಿಂದ ಶಾಂತಿ ನೆಲೆಸುವುದಿಲ್ಲ. ರಕ್ತಕ್ಕೆ ರಕ್ತ ಪರಿಹಾರವಾದರೆ ಸಮಾಜದ ಸ್ವಾಸ್ಥ್ಯ ಹಾಳುಗೊಡುತ್ತದೆ. ಪ್ರತೀಕಾರದ ಉದ್ದೇಶ ಸಮುದಾಯಗಳಿಗೆ ಇರಬಾರದು. ಅಂತದರಲ್ಲಿ ಬಾಳಿ ಬದುಕುವ ನಮ್ಮ ನಡುವೆ ಧರ್ಮದ ಅಂಧಕಾರದ ಗೋಡೆ ಬೇಡ. ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಹಬಾಳ್ವೆ ಹಾಳುಮಾಡುವ ಹುನ್ನಾರ ಮಾಡುತ್ತವೆ’ ಎಂದು ದೂರಿದರು.

ಲೂರ್ದು ಮಾತೆ ಪ್ರಾರ್ಥನಾ ಮಂದಿರದ ಫಾದರ್‌ ವಿಲಿಯಂ ವಿನ್ನಿಫ್ರೆಡ್‌,‘ದಿಗ್ಬ್ರಮೆ ಹುಟ್ಟಿಸುವ ಸನ್ನಿವೇಶದಲ್ಲಿ ನಾವಿದ್ದೇವೆ. ಪ್ರಕೃತಿಯಲ್ಲಿನ ಏರುಪೇರು ವಿನಾಶ ಕಾಲದ ಸುಳಿವು ನೀಡುತ್ತಿದೆ. ನಮ್ಮ ನಡುವಿನ ಪ್ರಾಣಿಗಳು ಬದಲಾಗದು. ಆದರೆ ಮನುಷ್ಯನ ಮರಿಗಳು ಮಾತ್ರ ಕಾಲಕ್ಕೆ ತಕ್ಕಂತೆ ಮಂಗವಾಗಿ, ಕತ್ತೆಯಾಗಿ, ಕೋತಿಯಾಗಿ ಪರಿವರ್ತನೆಯಾಗುತ್ತವೆ. ಕತ್ತಿ, ಬಂದೂಕು ಹಿಡಿದು ಶಾಂತಿ ಅರಸುವುದು ಮೂಢತನ. ಶಸ್ತ್ರಾಸ್ತ ಹಿಡಿದ ಪುಟಿನ್‌ ಪರಿಸ್ಥಿತಿ ಜಗತ್ತು ನೋಡುತ್ತಿದೆ. ಮಾಧ್ಯಮಗಳು ಪ್ರಭುದ್ಧತೆ ತೋರಿಸದಿದ್ದರೆ ಪ್ರಜ್ಞಾವಂತ ಸಮುದಾಯ ಸೃಷ್ಟಿ ಸಾಧ್ಯವಿಲ್ಲ’ ಎಂದರು.

ಕಾರ್ಯಕ್ರಮದಲ್ಲಿ ಮೌಲಾನಾ ಅಬೂಬಕ್ಕರ್‌ ಸಿದ್ದಿಕ್‌ ತಂಙ್ಞಳ್‌ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯ ರಹಮತುಲ್ಲಾ ಅಸಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.