ADVERTISEMENT

4ನೇ ಬಾರಿಗೆ ಕುವೆಂಪು ವಿವಿ ದೂರ ಶಿಕ್ಷಣ ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2022, 2:41 IST
Last Updated 25 ಮೇ 2022, 2:41 IST

ಶಿವಮೊಗ್ಗ: ಮೇ 26ರಿಂದ ನಡೆಯಬೇಕಿದ್ದ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಯನ್ನು ಮುಂದೂಡಿ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.

ಆಂತರಿಕ ಮೌಲ್ಯಮಾಪನ ಆಧರಿಸಿ ಪ್ರಮೋಟ್ ಮಾಡಿದ್ದ ದೂರ ಶಿಕ್ಷಣ ವಿಭಾಗದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಫಲಿತಾಂಶ ರದ್ದುಪಡಿಸಿ, ಪರೀಕ್ಷೆ ನಡೆಸುವ ಕುವೆಂಪು ವಿವಿ ನಿರ್ಧಾರಕ್ಕೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆ ಇದುವರೆಗೆ ತೆರವಾಗದ ಕಾರಣ ಮತ್ತೆ ಪರೀಕ್ಷೆಯನ್ನು ಮುಂದೂಡಲಾಗಿದೆ.

ಪರೀಕ್ಷೆ ಮುಂದೂಡಲಾಗಿದೆ ಎಂದು ಕುಲಸಚಿವ (ಮೌಲ್ಯಮಾಪನ) ನವೀನ್‌ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ, ಮುಂದಿನ ಪರೀಕ್ಷೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಪ್ರಮೋಟ್ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿ ಪರೀಕ್ಷೆ ನಡೆಸುವ ವಿವಿ ನಿರ್ಧಾರವನ್ನು ಕೆಲ ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿ ಪರೀಕ್ಷೆಗೆ ತಡೆಯಾಜ್ಞೆ ಕೋರಿದ್ದರು. ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ತಕರಾರು ಅರ್ಜಿ ಸಲ್ಲಿಸಲು ಕುವೆಂಪು ವಿವಿಗೆ 4 ವಾರಗಳ ಕಾಲಾವಕಾಶ ನೀಡಿತ್ತು.

ADVERTISEMENT

ವಿದ್ಯಾರ್ಥಿಗಳ ನಂತರ ಕೆಲ ಕೇಂದ್ರಗಳು ಪರೀಕ್ಷೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೊರೆಹೋಗಿವೆ. ಹೀಗಾಗಿ ಹೈಕೋರ್ಟ್ ಪರೀಕ್ಷೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಹೀಗಾಗಿ ಮತ್ತೆ ಪರೀಕ್ಷೆ ಮುಂದೂಡಲಾಗಿದೆ. ಇದುವರೆಗೆ ಒಟ್ಟು ನಾಲ್ಕು ಬಾರಿ ಪರೀಕ್ಷೆ ಮುಂದೂಡಿದ್ದು, 2019 ಮತ್ತು 2020ರಲ್ಲಿ ಪ್ರವೇಶ ಪಡೆದಿದ್ದ ವಿದ್ಯಾಾರ್ಥಿಗಳಿಗೆ ಪದವಿ ಪ್ರಮಾಣಪತ್ರದ ಕನಸು ಇನ್ನೂ ಮರೀಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.