ADVERTISEMENT

ರಜೆಯನ್ನೇ ಹಾಕದ ಸೋಮಣ್ಣನಿಗೆ ಇನ್ನು ಕಡ್ಡಾಯ ರಜೆ!

ಕುವೆಂಪು ವಿ.ವಿ.ಯಲ್ಲಿ ಸುದೀರ್ಘ 30 ವರ್ಷ ಕೆಲಸ, ನಿವೃತ್ತಿ ಇಂದು

ವೆಂಕಟೇಶ ಜಿ.ಎಚ್.
Published 30 ಜೂನ್ 2022, 3:43 IST
Last Updated 30 ಜೂನ್ 2022, 3:43 IST

ಶಿವಮೊಗ್ಗ: ವಿದ್ಯಾರ್ಥಿಗಳು, ಶಿಕ್ಷಕರು, ಸಹ ಸಿಬ್ಬಂದಿಯ ಪಾಲಿಗೆ ಇವರು ನೆಚ್ಚಿನ ಸೋಮಣ್ಣ (ಪಿ.ಸಿ.ಸೋಮಶೇಖರ್). ಬರೋಬ್ಬರಿ 30 ವರ್ಷ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಆಗಿ ಕೆಲಸ ಮಾಡಿದ್ದಾರೆ. ಗುರುವಾರ (ಜೂನ್ 30) ಅವರುಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ.

ವಿಶೇಷವೆಂದರೆ, ತಮ್ಮ ಸುದೀರ್ಘ ಕರ್ತವ್ಯದ ಹಾದಿಯಲ್ಲಿ ಸೋಮಣ್ಣ ಒಂದು ದಿನವೂ ರಜೆ ಪಡೆದಿಲ್ಲ. ಕಚೇರಿ ಕೆಲಸದ ಅವಧಿಯಲ್ಲಿ ನೆಪ ಹೇಳಿ ಹೊರಗೆ ಹೋಗಿ ಕಾಲಹರಣ ಮಾಡಿಲ್ಲ. ಚಹಾ, ಕಾಫಿಗೆಂದು ಸಮಯ ಹಾಳು ಮಾಡಿಲ್ಲ.

ಸೋಮಣ್ಣ ಮೂಲತಃ ಸೊರಬ ಸಮೀಪದ ಹಳೆಯ ಸೊರಬದವರು. ಅವರು ಅಮ್ಮನ ಮಡಿಲಲ್ಲಿ ಇದ್ದಾಗಲೇ ಹಸಿ ಬಾಣಂತಿಯಾಗಿದ್ದ ತಾಯಿ ತೀರಿಕೊಂಡಿದ್ದಾರೆ. ಹೀಗಾಗಿ ಇವರಿಗೆ ಅಮ್ಮನ ಮುಖವೂ ನೆನಪಿಲ್ಲ. ಅಪ್ಪ ಇನ್ನೊಂದು ಮದುವೆ ಆಗಿ ಮನೆ ಅಳಿಯ ಆಗಿದ್ದರಿಂದ ಇವರು ಅನಿವಾರ್ಯವಾಗಿ ಅಜ್ಜ–ಅಜ್ಜಿಯ ಅಕ್ಕರೆಯಲ್ಲಿಯೇ ಬೆಳೆದರು.

ADVERTISEMENT

ಪದವಿ ನಂತರ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಹಂಗಾಮಿ ನೌಕರ ಆಗಿ 1991ರ ನವೆಂಬರ್‌ನಲ್ಲಿ ಕೆಲಸಕ್ಕೆ ಸೇರಿದ್ದಸೋಮಣ್ಣ ಅವರ ಕೆಲಸ 1995ರ ಆಗಸ್ಟ್ 8ರಂದು ಕಾಯಂ ಆಯಿತು. ಮುಂದೆ ಪ್ರಥಮದರ್ಜೆ ಸಹಾಯಕ ಆಗಿಯೂ ಬಡ್ತಿ ಪಡೆದರು.

ವಿಶ್ವವಿದ್ಯಾಲಯದ ಕ್ಯಾಂಪಸ್‌ನ ನೌಕರರ ವಸತಿಗೃಹದಲ್ಲಿ ವಾಸವಿದ್ದ ಇವರು, ‘ಜ್ವರ ಬಂದರೆ, ಶೀತ ಆದರೆ ದಿಢೀರನೆ ಅನಾರೋಗ್ಯ ಕಾಡಿದರೆ ಕ್ಯಾಂಪಸ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲಸಕ್ಕೆ ಹಾಜರಾಗುತ್ತಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ.

ಸೋಮಣ್ಣ ಅವಿವಾಹಿತರು. ನಿತ್ಯ ಮನೆಯಲ್ಲಿ ತಾವೇ ಅಡುಗೆ ಮಾಡಿಕೊಂಡು ಊಟ ಮಾಡಿ, ಕಚೇರಿಗೂ ಊಟ ತರುತ್ತಿದ್ದರು. ‘ನನಗೆ ಕೆಲಸ ಬಿಟ್ಟರೆ ಯಾವುದೇ ಹವ್ಯಾಸ ಇಲ್ಲ. ಮದುವೆ ಆಗಿದ್ದರೆ ಹೀಗೆ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಲು ಆಗುತ್ತಿರಲಿಲ್ಲ’ ಎಂದು ಚಟಾಕಿ ಹಾರಿಸುತ್ತಾರೆ.

ನಾಲ್ಕು ಚಿನ್ನದ ಪದಕ ದೇಣಿಗೆ: ತಮ್ಮ ದುಡಿಮೆಯ ಹಣ ಕೂಡಿಟ್ಟು ವಿಶ್ವವಿದ್ಯಾಲಯದ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಶಿಕ್ಷಣ ವಿಭಾಗದಲ್ಲಿ ಸೋಮಣ್ಣ ತಲಾ ಒಂದೊಂದು ಚಿನ್ನದ ಪದಕ ದತ್ತಿ ಇಟ್ಟಿದ್ದಾರೆ. ಅವರ ಅವಿರತ ಸೇವೆ ಪರಿಗಣಿಸಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಸನ್ಮಾನಿಸಿದ್ದಾರೆ.

* ಕ್ಯಾಂಪಸ್‌ಗೆ ಬರುವ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ವೃಥಾ ತಪ್ಪಿಸಿಕೊಳ್ಳದಂತೆ ಹಾಗೂ ಅನಗತ್ಯವಾಗಿ ಕಾಲಹರಣ ಮಾಡದಂತೆ ಸ್ಫೂರ್ತಿ ತುಂಬಲು ಕೆಲಸಕ್ಕೆ ಒಂದು ದಿನವೂ ಗೈರು ಹಾಜರಾಗಲಿಲ್ಲ.

-ಪಿ.ಸಿ.ಸೋಮಶೇಖರ್, ಎಫ್‌ಡಿಎ, ಕುವೆಂಪು ವಿಶ್ವವಿದ್ಯಾಲಯ

* ಅನಾರೋಗ್ಯವಿದ್ದಾಗಲೂ ಸೋಮಶೇಖರ್ ರಜೆ ಹಾಕಿಲ್ಲ. ಕೆಲಸದಲ್ಲಿ ಸದಾ ಕ್ರಿಯಾಶೀಲರು. ವಿಶ್ವವಿದ್ಯಾಲಯದ ನೆಚ್ಚಿನ ಸಿಬ್ಬಂದಿ ಇಂದು ನಿವೃತ್ತಿ ಹೊಂದುತ್ತಿದ್ದಾರೆ.

-ಡಾ.ಸತ್ಯಪ್ರಕಾಶ್, ಸಾರ್ವಜನಿಕ ಸಂಪರ್ಕಾಧಿಕಾರಿ, ಕುವೆಂಪು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.