ADVERTISEMENT

ನಿರ್ವಹಣೆ ಕೊರತೆ: ಬಳಲುತ್ತಿದೆ ಕ್ರೀಡಾಂಗಣ

90ರ ದಶಕದ ಆರಂಭವಾದ ಗೋಪಾಲಗೌಡ ಕ್ರೀಡಾಂಗಣ

ಎಂ.ರಾಘವೇಂದ್ರ
Published 24 ಮಾರ್ಚ್ 2020, 11:22 IST
Last Updated 24 ಮಾರ್ಚ್ 2020, 11:22 IST
ಸಾಗರದ ಶಾಂತವೇರಿ ಗೋಪಾಲಗೌಡ ಕ್ರೀಡಾಂಗಣದ ಪೆವಿಲಿಯನ್‌ನ ಚಾವಣಿಯ ಶೀಟ್‌ಗಳು ಹಾರಿ ಹೋಗಿರುವುದು
ಸಾಗರದ ಶಾಂತವೇರಿ ಗೋಪಾಲಗೌಡ ಕ್ರೀಡಾಂಗಣದ ಪೆವಿಲಿಯನ್‌ನ ಚಾವಣಿಯ ಶೀಟ್‌ಗಳು ಹಾರಿ ಹೋಗಿರುವುದು   

ಸಾಗರ: ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕ್ರೀಡಾಂಗಣ ಎಂದರೆ ಅದು ಊರಿನ ಹೊರಭಾಗದಲ್ಲಿರುತ್ತದೆ. ಆದರೆ, ಸಾಗರದ ಕ್ರೀಡಾಪಟುಗಳ ಹಾಗೂ ಕ್ರೀಡಾ ಪ್ರೇಮಿಗಳ ಸುದೈವ ಎನ್ನುವಂತೆ ಇಲ್ಲಿನ ಗೋಪಾಲಗೌಡ ಕ್ರೀಡಾಂಗಣ ನಗರದ ಹೃದಯ ಭಾಗದಲ್ಲೇ ಇದೆ. ಆದರೆ, ಸೂಕ್ತ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ.

90ರ ದಶಕದ ಆರಂಭದಲ್ಲಿ ಇಲ್ಲಿನ ಆರ್.ಪಿ. ರಸ್ತೆಯ ತರಕಾರಿ ಮಾರುಕಟ್ಟೆಯ ಹಿಂಭಾಗದಲ್ಲಿ ಭತ್ತ ಬೆಳೆಯುವ ಗದ್ದೆ ಇತ್ತು. ಸುಮಾರು 5 ಎಕರೆಗೂ ಹೆಚ್ಚಿನ ಈ ಪ್ರದೇಶವನ್ನು ಈ ಕೃಷಿಭೂಮಿಯ ಮಾಲೀಕರ ವಿರೋಧದ ನಡುವೆಯೂ ಅಂದಿನ ಪುರಪಿತೃರು ದೂರದೃಷ್ಟಿಯಿಂದ ಕ್ರೀಡಾಂಗಣದ ಉದ್ದೇಶಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವಶಪಡಿಸಿಕೊಂಡಿದ್ದರು.

70ರ ದಶಕದಲ್ಲೇ ಸಣ್ಣ ತಾಲ್ಲೂಕು ಕೇಂದ್ರವಾದರೂ ಇಲ್ಲಿ ರಾಷ್ಟ್ರಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಯಲು ಕಾರಣರಾದ ಪುರಸಭೆಯ ಅಧ್ಯಕ್ಷರಾಗಿದ್ದ ಬಿ.ಎಸ್. ಚಂದ್ರಶೇಖರ್ ಸೇರಿ ಹಲವರ ಪ್ರಬಲ ಇಚ್ಛಾಶಕ್ತಿಯಿಂದ 1994ರಲ್ಲಿ ಗೋಪಾಲಗೌಡ ಕ್ರೀಡಾಂಗಣ ಆರಂಭವಾಯಿತು.

ADVERTISEMENT

2008ನೇ ಸಾಲಿನಲ್ಲಿ ಅಂದಿನ ನಗರಸಭೆ ಅತ್ಯಂತ ಮಹತ್ವಾಕಾಂಕ್ಷೆಯಿಂದ ಈ ಕ್ರೀಡಾಂಗಣದಲ್ಲಿ ಟರ್ಫ್ ಅಂಕಣವನ್ನು ನಿರ್ಮಿಸಿದ್ದು, ಕ್ರಿಕೆಟ್ ಆಟಗಾರರ ಹಾಗೂ ಅಭಿಮಾನಿಗಳ ಉತ್ಸಾಹ ಹೆಚ್ಚಲು ಕಾರಣವಾಗಿತ್ತು. ಟರ್ಫ್ ಅಂಕಣದ ಉದ್ಘಾಟನೆಗೆ ಬಂದಿದ್ದ ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ‘ರಾಜ್ಯದ ಅತ್ಯುತ್ತಮ ಟರ್ಫ್ ಅಂಕಣಗಳಲ್ಲಿ ಇದೂ ಕೂಡ ಒಂದು’ ಎಂದು ಶ್ಲಾಘಿಸಿದ್ದರು.

ನಂತರದ ಹಲವು ವರ್ಷ ಈ ಕ್ರೀಡಾಂಗಣದಲ್ಲಿ ಅನೇಕ ಮಹತ್ವದ ಪಂದ್ಯಾವಳಿಗಳು ನಡೆದಿವೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಯುವ ಕ್ರಿಕೆಟಿಗರು ಇಲ್ಲಿ ತಾಲೀಮು ನಡೆಸುತ್ತಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯದ ಲೀಗ್ ಕ್ರಿಕೆಟ್ ಪಂದ್ಯಾವಳಿಗಳು ಇಲ್ಲಿ ನಿಯಮಿತವಾಗಿ ನಡೆಯುತ್ತಿವೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಕ್ರೀಡಾಂಗಣದ ನಿರ್ವಹಣೆಯ ಬಗ್ಗೆ ಅದರ ಜವಾಬ್ದಾರಿ ಹೊತ್ತಿರುವ ನಗರಸಭೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಆಸಕ್ತಿ ಇಲ್ಲದಂತಾಗಿದೆ.

ಕಳೆದ ನವೆಂಬರ್‌ 13ರಂದು ನಗರದಲ್ಲಿ ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಕ್ರೀಡಾಂಗಣದ ಪೆವಿಲಿಯನ್‌ನ ಚಾವಣಿಯ ಶೀಟ್‌ಗಳು ಹಾರಿ ಹೋಗಿವೆ. ಘಟನೆ ನಡೆದ ಮರುದಿನವೇ ಸ್ಥಳಕ್ಕೆ ಬಂದ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಶೀಟ್‌ಗಳನ್ನು ಅಳವಡಿಸುವುದಾಗಿ ನೀಡಿದ್ದ ಭರವಸೆ ನಾಲ್ಕು ತಿಂಗಳು ಕಳೆದರೂ ಈಡೇರಿಲ್ಲ.

ಕ್ರೀಡಾಂಗಣದ ಸುತ್ತಲೂ ಅಳವಡಿಸಿರುವ ಬೇಲಿ ಶಿಥಿಲಗೊಂಡಿದ್ದು, ಅಲ್ಲಲ್ಲಿ ಗೇಟ್‌ಗಳು ಮುರಿದು ಬಿದ್ದಿವೆ. ಈ ಕಾರಣ ರಾತ್ರಿ ವೇಳೆ ಮದ್ಯಪಾನ ಮಾಡುವವರಿಗೆ ಕ್ರೀಡಾಂಗಣ ಒಂದು ‘ಅಡ್ಡೆ’ಯಾಗಿ ಮಾರ್ಪಾಟಾಗಿದೆ.

ಊರಿನ ಕ್ರೀಡಾ ಕ್ಷೇತ್ರದ ಹೆಮ್ಮೆಯ ಪ್ರತೀಕದಂತಿರುವ ಈ ಕ್ರೀಡಾಂಗಣದ ನಿರ್ವಹಣೆ ಸೂಕ್ತವಾಗಿದ್ದರೆ ಮಾತ್ರ ಅದನ್ನು ಸುಸ್ಥಿತಿಯಲ್ಲಿಡಲು ಸಾಧ್ಯ. ಇಲ್ಲದಿದ್ದರೆ ಶೀಘ್ರ ಅದು ತನ್ನ ಹಿಂದಿನ ವೈಭವ, ಮೆರುಗನ್ನು ಕಳೆದುಕೊಳ್ಳುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.