ರಿಪ್ಪನ್‌ಪೇಟೆ: ಎರಡು ವರ್ಷಗಳ ಹಿಂದೆ ಪುನಶ್ಚೇತನಗೊಂಡಿದ್ದ ಇಲ್ಲಿನ ಚಿಪ್ಪಿಗರ ಕೆರೆಗೆ ಚರಂಡಿಯ ತ್ಯಾಜ್ಯ ಸೇರ್ಪಡೆಯಾಗುತ್ತಿದ್ದು, ಗ್ರಾಮಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹೊಸನಗರ ರಸ್ತೆಯ ರಾಜ್ಯ ಹೆದ್ದಾರಿ ಪಕ್ಕದ ಈ ಕೆರೆಗೆ ಕಾಯಕಲ್ಪ ನೀಡಲಾಗಿತ್ತು. ಅದಾದ ನಂತರ ಗ್ರಾಮದ ಕೊಳವೆಬಾವಿ, ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗಿತ್ತು. ಸ್ವ-ಸಹಾಯ ಗುಂಪುಗಳು, ಗ್ರಾಮಸ್ಥರು ಹಾಗೂ ಗ್ರಾಮಾಡಳಿತದ ಸಹಕಾರದೊಂದಿಗೆ ಕೆರೆ ಅಭಿವೃದ್ಧಿಪಡಿಸಲಾಗಿತ್ತು.
ಕೆರೆ ಏರಿ ಮೇಲೆ ವಾಯುವಿಹಾರಿಗಳ ಅನುಕೂಲಕ್ಕಾಗಿ ₹ 3 ಲಕ್ಷ ವೆಚ್ಚದಲ್ಲಿ ಕಲ್ಲುಹಾಸು, ಮಕ್ಕಳಿಗಾಗಿ ಜಾರುಬಂಡಿ, ಜೋಕಾಲಿ ಹಾಗೂ ಆಟಿಕೆ ಸಾಮಗ್ರಿಗಳನ್ನು ಅಳವಡಿಸಿ, ಸುಂದರ ಕೈತೋಟ ನಿರ್ಮಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಒಂದರ್ಥದಲ್ಲಿ ಕೆರೆಯ ಗತವೈಭವ ಮರುಕಳಿಸಿತ್ತು. ಆದರೆ ಈ ವರ್ಷದ ಮಳೆಗಾಲ ಆರಂಭವಾದ ಬಳಿಕ ಇಲ್ಲಿನ ಚಿತ್ರಣವೇ ಬದಲಾಗಿದೆ.
ಸ್ಥಳೀಯ ಗ್ರಾಮಾಡಳಿತವು ಕೆರೆಗೆ ಕಲುಷಿತ ನೀರು ಸೇರದಂತೆ ರೂಪಿಸಿದ್ದ ವ್ಯವಸ್ಥೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಚರಂಡಿ ನೀರು ಹೊರಹೋಗುವಂತೆ ಮಾಡಲು ಲಕ್ಷಾಂತರ ರೂಪಾಯಿ ವ್ಯಯಿಸಿದ್ದರೂ ಕಳಪೆ ಕಾಮಗಾರಿಯಿಂದಾಗಿ ತ್ಯಾಜ್ಯವು ಕೆರೆಯ ಒಡಲು ಸೇರುತ್ತಿದೆ. ಪಟ್ಟಣದ ಎಲ್ಲಾ ಮೂಲಗಳಿಂದ ಹರಿದು ಬರುವ ತ್ಯಾಜ್ಯ ಹಾಗೂ ಸಾರ್ವಜನಿಕ ಶೌಚಾಲಯದ ನೀರು ಸೇರ್ಪಡೆಗೊಂಡು ಕೆರೆ ಕಲುಷಿತಗೊಂಡಿದೆ.
‘ಕೆರೆಯ ಸುತ್ತಲಿನ ಉದ್ಯಾನ ಹಾಳು ಬಿದ್ದಿದೆ. ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಕೆರೆ ಸುತ್ತಮುತ್ತಲಿನ ಪ್ರದೇಶವು ಪ್ಲಾಸ್ಟಿಕ್ ಮತ್ತು ಕಟ್ಟಡ ತಾಜ್ಯ, ಕಸ–ಕಡ್ಡಿಯಿಂದ ತುಂಬಿದೆ. ಈ ನೀರಿನಿಂದ ಜಾನುವಾರು, ಪಕ್ಷಿ ಸಂಕುಲಕ್ಕೆ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
‘ಕೆರೆಗೆ ಚರಂಡಿ ನೀರಿನ ಹರಿವು ತಡೆಯಲು ತಕ್ಷಣವೇ ತಡೆಗೋಡೆ ನಿರ್ಮಿಸಬೇಕು. ನಿಯಮಿತ ಮೇಲ್ವಿಚಾರಣೆ ಮತ್ತು ಶುಚಿತ್ವದ ಕಡೆ ಗಮನ ಹರಿಸಬೇಕು. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನೈಸರ್ಗಿಕ ಸಂಪನ್ಮೂಲವಾದ ಈ ಜಲಮೂಲ ಪೂರ್ವಜರ ಕೊಡುಗೆ. ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತುರ್ತು ಗಮನಹರಿಸಬೇಕುಹನೀಫ್ ಸಾಮಾಜಿಕ ಕಾರ್ಯಕರ್ತ
ಪರಿಸರ ಕಾಳಜಿ ಕೆರೆ ಸಂರಕ್ಷಣೆಯ ಅರಿವು ಇಲ್ಲದ ಗ್ರಾಮಾಡಳಿತವು ಕಣ್ಣಿದ್ದೂ ಕುರುಡಾಗಿರುವಂತೆ ವರ್ತಿಸುತ್ತಿರುವುದು ಕಳವಳಕಾರಿ. ಇದು ಆಡಳಿತದ ನಿರ್ಲಕ್ಷಕ್ಕೆ ಸಾಕ್ಷಿಟಿ.ಆರ್. ಕೃಷ್ಣಪ್ಪ ಹಿರಿಯ ನಾಗರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.