ADVERTISEMENT

ಶಿಕಾರಿಪುರ: ಭೂಸ್ವಾಧೀನ ವಿರೋಧಿಸಿ ಕಣ್ಣೀರು ಹಾಕಿದ ರೈತ ಮಹಿಳೆ

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 13:52 IST
Last Updated 12 ಡಿಸೆಂಬರ್ 2023, 13:52 IST
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು   

ಶಿಕಾರಿಪುರ: ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣಕ್ಕೆ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ರೈತ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಎದುರು ಕಣ್ಣೀರು ಹಾಕಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು.

‘ರೈಲು ಮಾರ್ಗ ನಿರ್ಮಾಣಕ್ಕೆ ಮೊದಲು ಹೇಳಿದಕ್ಕಿಂತ ಹೆಚ್ಚಿನ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ನಮಗೆ ಕೇವಲ ನಾಲ್ಕು ಎಕರೆ ಭೂಮಿ ಇದ್ದು, ರೈಲು ಮಾರ್ಗಕ್ಕೆ ಎರಡು ಎಕರೆಗೂ ಹೆಚ್ಚು ಭೂಮಿ ಸ್ವಾಧೀನವಾಗಲಿದೆ. ಒಂದೂ ಮುಕ್ಕಾಲು ಎಕರೆ ಮಾತ್ರ ಉಳಿಯಲಿದೆ. ಭೂ ಸ್ವಾಧೀನದಿಂದ ಕೃಷಿಯನ್ನೇ ನಂಬಿರುವ ನಮ್ಮ ಜೀವನ ಹಾಳಾಗಲಿದೆ. ನಮಗೆ ದಯಾಮರಣ ಕರುಣಿಸಿ’ ಎಂದು ಬಗನಕಟ್ಟೆ ಗ್ರಾಮದ ರೈತ ಮಹಿಳೆ ಮಮತಾ ಪರಮೇಶ್ವರಪ್ಪ ಕಣ್ಣೀರು ಹಾಕಿದರು.

ADVERTISEMENT

ರೈತ ಮಹಿಳೆಯನ್ನು ಸಮಾಧಾನ ಪಡಿಸಲು ಮುಂದಾದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ರೈಲು ಮಾರ್ಗಕ್ಕೆ ಹೆಚ್ಚಿನ ಪ್ರಮಾಣದ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಮಾಹಿತಿ ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಮಲ್ಲೇಶಪ್ಪ ಬಿ.ಪೂಜಾರ್ ಅವರಿಗೆ ಸೂಚಿಸಿದರು.

ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ, ‘ಬೈಪಾಸ್ ರಸ್ತೆ, ರಿಂಗ್ ರಸ್ತೆ ಹಾಗೂ ರೈಲು ಮಾರ್ಗಗಳಿಗೆ ಸ್ವಾಧೀನ ಪಡಿಸಿಕೊಳ್ಳುವ ಕೃಷಿ ಭೂಮಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ರೈತರಿಗೆ ಯಾವುದೇ ನೋಟಿಸ್ ನೀಡದೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿರುವುದು ಅಕ್ಷಮ್ಯ’ ಎಂದು ಆರೋಪಿಸಿದರು.

ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್, ‘ಪುರಸಭೆ ವ್ಯಾಪ್ತಿಯ ನಿವೇಶನ ಹಾಗೂ ಮನೆಗಳಿಗೆ ಇ–ಸ್ವತ್ತು ನೀಡಲು ಹಾಗೂ ಖಾತೆ ಬದಲಾವಣೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ಪುರಸಭೆ ಕಚೇರಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಬೇಕು. ಅಂಜನಾಪುರ ಜಲಾಶಯ ಹಾಗೂ ಅಂಬ್ಲಿಗೊಳ್ಳ ಜಲಾಶಯದಲ್ಲಿ ಹೂಳೆತ್ತುವ ಕಾರ್ಯ ನಡೆಸಲು ಮುಂದಾಗಬೇಕು’ ಎಂದು ಮನವಿ ಮಾಡಿದರು.

ಕಣಿವೆಮನೆ ಹಾಗೂ ಶಾಂತಿವನ ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಿಸಿ 8 ವರ್ಷಗಳು ಕಳೆದಿವೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣ್ ಕುಮಾರ್ ತಿಳಿಸಿದರು.

ತಾಲ್ಲೂಕಿನಲ್ಲಿ ಕೆರೆ ಹಾಗೂ ಸ್ಮಶಾನ ಒತ್ತುವರಿ ತೆರವುಗೊಳಿಸಬೇಕು. ರೈತರ ಟಿಸಿಯನ್ನು ಸಮಯಕ್ಕೆ ಸರಿಯಾಗಿ ರಿಚಾರ್ಜ್ ಮಾಡಿಸಬೇಕು ಎಂದು ಕೆಡಿಪಿ ಮಾಜಿ ಸದಸ್ಯ ಉಮೇಶ್ ಮಾರವಳ್ಳಿ ಮನವಿ ಮಾಡಿದರು.

ತಾಲ್ಲೂಕಿನಲ್ಲಿ ಓಸಿ, ಇಸ್ಪೀಟ್ ಹಾಗೂ ಗಾಂಜಾ ದಂಧೆ ಹೆಚ್ಚಾಗಿರುವ ಬಗ್ಗೆ, ಕೃಷಿ ಭೂಮಿಗೆ ಚರಂಡಿ ನೀರು ಸೇರುತ್ತಿರುವುದನ್ನು ತಡೆಗಟ್ಟುವಂತೆ, ಕೃಷಿ ಭೂಮಿಗೆ ದಾರಿ ನಿರ್ಮಾಣ, ಬನ್ನೂರು ಗ್ರಾಮದಲ್ಲಿ ಸ್ಮಶಾನ ಸ್ಥಳಾಂತರ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ 250ಕ್ಕೂ ಹೆಚ್ಚು ಜನರು ಟೋಕನ್ ಪಡೆದು ಜಿಲ್ಲಾಧಿಕಾರಿ ಅವರ ಜನತಾ ದರ್ಶನದಲ್ಲಿ ಪಾಲ್ಗೊಂಡು ಮನವಿ ಸಲ್ಲಿಸಿದರು.

ಅಹವಾಲು ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ‘ಜನರ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಕಂಡೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.