ADVERTISEMENT

ಭೂಸ್ವಾಧೀನಕ್ಕೆ ₹ 20.60 ಕೋಟಿ

ವಿವಿಧೆಡೆ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ಬಿ. ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 7:22 IST
Last Updated 16 ಫೆಬ್ರುವರಿ 2022, 7:22 IST
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ. ರಾಘವೇಂದ್ರ ಪರಿಶೀಲನೆ ನಡೆಸಿದರು.
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ. ರಾಘವೇಂದ್ರ ಪರಿಶೀಲನೆ ನಡೆಸಿದರು.   

ಶಿವಮೊಗ್ಗ: ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ ₹ 8.61 ಕೋಟಿ ಹಾಗೂ ಭೂಸ್ವಾಧೀನಕ್ಕಾಗಿ ₹ 20.60 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗದ ಸವಳಂಗ ರಸ್ತೆ,ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕಡದಕಟ್ಟೆ, ಕಾಶಿಪುರ ಗೇಟ್ ರೈಲ್ವೆ ಮೇಲ್ಸೇತುವೆ ಹಾಗೂ ಶಿವಮೊಗ್ಗ ವಿದ್ಯಾನಗರ ಬಳಿಯ ಕಾಮಗಾರಿಗಳ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈಲ್ವೆ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಮೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಅಂದಾಜು ವೆಚ್ಚ ₹ 116.31 ಕೋಟಿಗಳಾಗಿದ್ದು, ಇದರಲ್ಲಿ ಕಾಮಗಾರಿಯ ವೆಚ್ಚದ ಶೇ 50ರಷ್ಟು ಹಾಗೂ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸಲಿದೆ. ಈ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ₹ 70.5 ಕೋಟಿಗಳ ಅನುದಾನವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಈ ಮೂರು ಕಾಮಗಾರಿಗಳನ್ನು ಎಸ್.ಆರ್.ಸಿ. ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಮೂರೂ ಕಾಮಗಾರಿಗಳು ಭರದಿಂದ ಸಾಗಿವೆ. ಜಿಲ್ಲಾಡಳಿತವು ಭೂಸ್ವಾಧೀನ ಹಾಗೂ ಯುಟಿಲಿಟಿ ಶಿಫ್ಟಿಂಗ್‌ಗಾಗಿ ಅಗತ್ಯ ಕ್ರಮವನ್ನು ಕೈಗೊಂಡಿದ್ದು, ಶೀಘ್ರದಲ್ಲಿಯೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಟರ್ಮಿನಲ್ ಸ್ಟೇಷನ್ ಕಾಮಗಾರಿಗೆ ಟೆಂಡರ್‌: ₹ 76 ಕೋಟಿ ಅಂದಾಜು ವೆಚ್ಚದಲ್ಲಿ ಕೋಟೆಗಂಗೂರು ಕೋಚಿಂಗ್ ಡಿಪೊವನ್ನು ಕೇಂದ್ರ ಸರ್ಕಾರವು ಶಿವಮೊಗ್ಗದ ಕೋಟೆಗಂಗೂರಿಗೆ ಮಂಜೂರು ಮಾಡಿದ್ದು, ಈ ಕೋಚಿಂಗ್ ಡಿಪೊಗಾಗಿ 10 ಎಕರೆ ಖಾಸಗಿ ಭೂಸ್ವಾಧಿನದ ಅಗತ್ಯವಿದ್ದು, ಕೆ.ಐ.ಎ.ಡಿ.ಬಿ. ಸಂಸ್ಥೆ ಈ ಭೂಮಿಯನ್ನು 2 ತಿಂಗಳೊಳಗೆ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಿದೆ. ರೈಲ್ವೆ ಇಲಾಖೆಯು ರೈಲ್ವೆ ಜಮೀನಿನಲ್ಲಿ ಈಗಾಗಲೇ ಅಗತ್ಯ ಪೂರ್ವ ಸಿದ್ಧತೆಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.

ಕೋಟೆಗಂಗೂರಿನಲ್ಲಿ ₹ 21 ಕೋಟಿ ಅಂದಾಜು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿರುವ ಟರ್ಮಿನಲ್ ಸ್ಟೇಷನ್ ಕಾಮಗಾರಿಯ ಟೆಂಡರ್ ಅನ್ನು ಶೀಘ್ರದಲ್ಲಿಯೇ ಕರೆಯಲಾಗುತ್ತದೆ ಎಂದರು.

ರೈಲ್ವೆ ಅಧಿಕಾರಿಗಳಾದ ಶ್ರೀಧರಮೂರ್ತಿ, ಆಂಜನೇಯ ಪ್ರಸಾದ್, ಮುಖ್ಯ ಎಂಜಿನಿಯರ್ ಪ್ರಭಾಕರನ್, ವಿಜಯ್ ಭಾಸ್ಕರ್, ರಾಜ ಕುಮಾರ್, ಬಸವರಾಜಪ್ಪ. ಶಶಿ ತಿವಾರಿ ಪ್ರಾಜೆಕ್ಟ್ ಮ್ಯಾನೇಜರ್ ಸುಧೀರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಶಿವಮೊಗ್ಗ ಮಹಾಪೌರರಾದ ಸುನೀತಾ ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.