ADVERTISEMENT

ಜಮೀನು ವಿವಾದ: ವ್ಯಕ್ತಿ ಹತ್ಯೆ

ಭದ್ರಾಪುರದಲ್ಲಿ ಮತ್ತೆ ಹರಿದ ನೆತ್ತರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 10:31 IST
Last Updated 7 ಮಾರ್ಚ್ 2020, 10:31 IST
ಕರಿಬಸಪ್ಪ
ಕರಿಬಸಪ್ಪ   

ಹೊಳೆಹೊನ್ನೂರು: ಸಮೀಪದ ಭದ್ರಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಜಮೀನಿಗೆ ನೀರು ಹರಿಸುವ ವಿಚಾರದಲ್ಲಿ ಕುಟುಂಬದವರ ನಡುವೆ ಗಲಾಟೆಯಾಗಿ ಕರಿಯಪ್ಪ (55) ಅವರ ಹತ್ಯೆಯಾಗಿದ್ದು, ಐವರಿಗೆ ತೀವ್ರ ಗಾಯಗಳಾಗಿವೆ.

ಕರಿಯಪ್ಪ ಅವರ ಮಕ್ಕಳಾದ ಮನೋಹರ್ (30), ನಾಗರಾಜ್(28), ಸಹೋದರ ಬೀರಪ್ಪ (50), ಬೀರಪ್ಪ ಅವರ ಮಗ ನಾಗರಾಜ (33) ಹಾಗೂ ಮತ್ತೊಬ್ಬ ಸಹೋದರನ ಮಗ ಅರುಣ್ (26) ಎಂಬುವರ ಮೇಲೆ ಹಲ್ಲೆ ನಡೆದಿದೆ. ಬೀರಪ್ಪ ಶಿವಮೊಗ್ಗದ ಮೆಟ್ರೊ ಅಸ್ಪತ್ರೆಯಲ್ಲಿ ಹಾಗೂ ಉಳಿದವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ಜಮೀನು ವಿಚಾರಕ್ಕೆ ಸಂಬಂಧಿಸಿ 20 ವರ್ಷಗಳ ಹಿಂದೆ ಕೊಲೆ ಮಾಡಿದ ವ್ಯಕ್ತಿ ಹಾಗೂ ಕೊಲೆಯಾದ ವ್ಯಕ್ತಿಯ ಕುಟುಂಬದವರು ಹುಚ್ಚಂಗಪ್ಪ ಎಂಬವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು ಎಂದು ಸ್ಥಳೀಯರಿಂದ ಮಾಹಿತಿ ದೊರೆತಿದೆ.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿ ರಮೇಶ್, ಜಗದೀಶ್ ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಭದ್ರಾಪುರದ ಸರ್ವೆ ನಂಬರ್ 196ರಲ್ಲಿ 13 ಎಕರೆ 27 ಗುಂಟೆ ಜಮೀನು ಇದ್ದು, ಮಾದಾಳಪ್ಪ, ಹಾಲಪ್ಪ ಹಾಗೂ ನಾಗಪ್ಪ ಎಂಬವವರ ಹೆಸರಿನಲ್ಲಿ ಜಂಟಿ ಖಾತೆ ಇತ್ತು. ನಂತರ ಈ ಜಮೀನು ಮೂವರ ನಡುವೆ ಹಂಚಿಕೆಯಾಗಿದೆ.

ಮಾದಾಳಪ್ಪ ಅವರ ಜಮೀನನ್ನು ಮಗ ಕರಿಯಪ್ಪ ಹಾಗೂ ಮೊಮ್ಮಗ ನಾಗರಾಜ್ ನಡೆಸಿಕೊಂಡು ಹೋಗುತ್ತಿದ್ದು, ಹಾಲಪ್ಪನವರ ಜಮೀನನ್ನು ಬಡ್ಡಿ ಪರಮೇಶಪ್ಪ ಹಾಗೂ ಆತನ ಕುಟುಂಬದವರು ನಡೆಸುತ್ತಿದ್ದರು. ಕುಟುಂಬದವರ ನಡುವೆ ಜಮೀನಿಗೆ ನೀರು ಹರಿಸುವ ಕಾಲುವೆ ವಿಚಾರದಲ್ಲಿ ಗಲಾಟೆ ಇತ್ತು.

ಗುರುವಾರ ಗ್ರಾಮಸ್ಥರು ಕುಟುಂಬದ ವ್ಯಾಜ್ಯವನ್ನು ಪಂಚಾಯಿತಿಯಲ್ಲಿ ನಡೆಸಲು ಸಮಯ ನಿಗದಿ ಮಾಡಿದ್ದರು. ಆದರೆ ಹಾಲಪ್ಪನವರ ಕುಟುಂಬ ಪಂಚಾಯಿತಿಗೆ ಬಂದಿರಲಿಲ್ಲ. ನಿನ್ನೆ ರಾತ್ರಿ ಕರಿಯಪ್ಪ ಒಬ್ಬರೇ ಜಮೀನಿಗೆ ಹೋಗುವಾಗ ಬಡ್ಡಿ ಪರಮೇಶ್ವರ್ ಹಾಗೂ ಆತನ ಸಹಚರರು ಕರಿಬಸಪ್ಪ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಬಡ್ಡಿ ಪರಮೇಶಪ್ಪ ಹಾಗೂ ಇತರ 9 ಮಂದಿ ಕರಿಯಪ್ಪ ಅವರ ಮೇಲೆ ಹಲ್ಲೆ ನಡೆಸಿದರು ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಐದಾರು ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ಜಮೀನಿಗೆ ಹೋಗುವ ದಾರಿ ವಿಚಾರವಾಗಿ ಪ್ರಕಾಶ್, ರಮೇಶ್ ಹಾಗೂ ಚಂದ್ರು ಅವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಮತ್ತೆ ಹತ್ಯೆಯ ಸುದ್ದಿ ಕೇಳಿ ಸುತ್ತಲಿನ ಗ್ರಾಮಸ್ಥರು ದಿಗ್ಭ್ರಮೆಗೊಳಗಾಗಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್‌ಪಿ ಸುಧಾಕರ ನಾಯ್ಕ, ಅಡಿಷನಲ್ ಎಸ್‌ಪಿ ಶೇಖರ್ ತಕ್ಕಾಣ್ಣನವರ್, ಸಿಪಿಐ ಮಂಜುನಾಥ, ಎಸ್ಐ ಸುರೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಇಲಾಖೆಯಿಂದ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.