ADVERTISEMENT

‘ಕಾಯ್ದೆ ತಿದ್ದುಪಡಿಯಿಂದ ಅನ್ಯಾಯ’

ಭದ್ರಾವತಿ ಎಂಪಿಎಂಗೆ ಮತ್ತೆ ಲೀಸ್‌ ನೀಡದಿರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:16 IST
Last Updated 27 ಸೆಪ್ಟೆಂಬರ್ 2020, 3:16 IST

ಸಾಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸೆ.28ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸ್ವರಾಜ್ ಇಂಡಿಯಾ ಪಕ್ಷದ ಪ್ರಮುಖ ಶಿವಾನಂದ ಕುಗ್ವೆ ಮನವಿ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಕೃಷಿ ಭೂಮಿಯನ್ನು ರೈತರಲ್ಲದವರೂ ಖರೀದಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೆ ಕೃಷಿ ಭೂಮಿಯ ಖರೀದಿಗೆ ಇದ್ದ ಆದಾಯದ ಮಿತಿಯನ್ನು ಕೂಡ ತೆಗೆದು ಹಾಕಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಭಾರಿ ಶ್ರೀಮಂತರು ಮಾತ್ರ ಭೂಮಿಯ ಒಡೆಯರಾಗುವುದು ಖಚಿತ’ ಎಂದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಲೆನಾಡಿನ ಅಡಿಕೆ ಬೆಳೆಗಾರರು ಸೇರಿ ಎಲ್ಲಾ ರೈತರಿಗೆ ಮಾರಕವಾಗಲಿದೆ. ತಿದ್ದುಪಡಿಯಿಂದ ಎಪಿಎಂಸಿ ಹಂತ ಹಂತವಾಗಿ ಮುಚ್ಚುವ ಹಂತಕ್ಕೆ ಬರಲಿದೆ ಎಂದು ಹೇಳಿದರು.

ADVERTISEMENT

ಭದ್ರಾವತಿಯ ಎಂಪಿಎಂಗೆ ನೆಡುತೋಪು ಬೆಳೆಸಲು ನೀಡಿರುವ ಸಾವಿರಾರು ಎಕರೆ ಭೂಮಿಯ ಲೀಸ್ ಅವಧಿ ಮುಕ್ತಾಯಗೊಂಡಿದೆ. ನೆಡುತೋಪು ಬೆಳೆಸಿದ ಕಾರಣ ಮಲೆನಾಡಿನ ಪರಿಸರಕ್ಕೆ ಸಾಕಷ್ಟು ಹಾನಿ ಉಂಟಾಗಿದೆ. ಹೀಗಾಗಿ ಮತ್ತೆ ಯಾವುದೇ ಕಾರಣಕ್ಕೂ ಲೀಸ್ ನವೀಕರಿಸಬಾರದು ಎಂಬುದು ರೈತರ, ಪರಿಸರಾಸಕ್ತರ ಒತ್ತಾಯವಾಗಿದೆ. ಸರ್ಕಾರ ಜನರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಆಗ್ರಹಿಸಿದರು.

ಸ್ವರಾಜ್ ಅಭಿಯಾನದ ಪ್ರಮುಖ ಎನ್.ಡಿ. ವಸಂತ ಕುಮಾರ್, ‘ಕಾಯ್ದೆ ತಿದ್ದುಪಡಿಯನ್ನು ವಿರೋಧಿಸುವುದು ರೈತರಿಗೆ ಅನಿವಾರ್ಯವಾಗಿದೆ. ಇದು ರೈತರ ಅಳಿವು ಉಳಿವಿನ ಪ್ರಶ್ನೆ. ರೈತ ವರ್ಗ ಉಳಿಯದಿದ್ದರೆ ಸಮಾಜದ ಇತರ ವರ್ಗಕ್ಕೂ ಅದರ ಬಿಸಿ ತಟ್ಟಲಿದೆ. ಹೀಗಾಗಿ ಎಲ್ಲಾ ವರ್ಗದವರು ಬಂದ್ ಕರೆಯನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ರೈತ ಸಂಘದ ಪ್ರಮುಖರಾದ ಕನ್ನಪ್ಪ ಹೊಸಕೊಪ್ಪ, ಮಂಜಪ್ಪ, ಟಿ.ವಿ.ಮಲ್ಲೇಶಪ್ಪ, ಮಂಜಪ್ಪ ಮಾಸೂರು, ನಾಗರಾಜ್ ಇದ್ದರು.

ರಸ್ತೆ ತಡೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸೆ.28ರಂದು ಬೆಳಿಗ್ಗೆ 11ಕ್ಕೆ ನಗರ ಪೊಲೀಸ್ ಠಾಣೆ ವೃತ್ತದಲ್ಲಿ ರಸ್ತೆತಡೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.