ADVERTISEMENT

ಕನ್ನಡದಲ್ಲಿ ಕಾನೂನು ಕೃತಿ ರಚಿಸುವ ಗ್ರಾಮೀಣ ಪ್ರತಿಭೆ ಸಿ.ಎನ್. ಮಂಜಪ್ಪ

ಎಂ.ರಾಘವೇಂದ್ರ
Published 1 ನವೆಂಬರ್ 2022, 6:36 IST
Last Updated 1 ನವೆಂಬರ್ 2022, 6:36 IST
ಸಿ.ಎನ್. ಮಂಜಪ್ಪ
ಸಿ.ಎನ್. ಮಂಜಪ್ಪ   

ಸಾಗರ: ತಾಲ್ಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟ ಗ್ರಾಮ ಚೆನ್ನಿಗನತೋಟ. ಈ ಗ್ರಾಮ ನಗರದಿಂದ 13 ಕಿ.ಮೀ. ದೂರದಲ್ಲಿದೆ. ಇಲ್ಲಿನ ವಾಸಿ ಸಿ.ಎನ್.ಮಂಜಪ್ಪ ಅವರು ಕಾನೂನು ವಿಷಯಕ್ಕೆ ಸಂಬಂಧಿಸಿ 8ಕ್ಕೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಕಾನೂನು ಪದವೀಧರರಾದ ಮಂಜಪ್ಪ ಅವರು ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಅಧ್ಯಾಪಕರಾಗಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥರಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆಡಳಿತ ತರಬೇತಿ ಸಂಸ್ಥೆ, ಕರ್ನಾಟಕ ಕಾನೂನು ಸುಧಾರಣಾ ಮತ್ತು ಸಂಸದೀಯ ಸಂಸ್ಥೆ, ಕರ್ನಾಟಕ ಪಂಚಾಯತ್ ಪರಿಷತ್, ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಸೇರಿದಂತೆ ಹಲವು ಸಂಸ್ಥೆ ಹಾಗೂ ಇಲಾಖೆಗಳಿಗೆ ಕಾನೂನಿಗೆ ಸಂಬಂಧಪಟ್ಟ ಸಾಹಿತ್ಯ ರಚನೆಗೆ ಮಂಜಪ್ಪ ಅವರು ನೆರವಾಗಿದ್ದಾರೆ.

ADVERTISEMENT

2015ರಲ್ಲಿ ಜಾರಿಗೆ ಬಂದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಕರಡು ತಯಾರಿಸುವಲ್ಲಿ ಮಂಜಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ‘ಎಲ್ಲಾ ಸಂಸ್ಥೆಗಳು ತಮ್ಮಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ನಿಯಮಗಳನ್ನು ಅಳವಡಿಸಬೇಕು’ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದಾಗ ಮೈಸೂರು ವಿವಿಗೆ ನಿಯಮಗಳನ್ನು ರೂಪಿಸಿಕೊಟ್ಟ ಹೆಗ್ಗಳಿಕೆ ಮಂಜಪ್ಪ ಅವರದ್ದು.

‘ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993’, ‘ಮಾಹಿತಿ ಹಕ್ಕು ಅಧಿನಿಯಮ-2006’, ‘ಕಂಪನಿ ಕಾನೂನು’, ‘ಅಪರಾಧಿಕ ಕಾನೂನು–ಪೊಲೀಸ್ ಮತ್ತು ನ್ಯಾಯಾಲಯಗಳ ವ್ಯವಹರಣಾ ಕೈಪಿಡಿ’, ‘ವಿವಾಹ ಮತ್ತು ತಾಯ್ತನದ ವಿಸ್ತೃತ ಆಯಾಮಗಳು’, ‘ಕರ್ನಾಟಕ ಮುನ್ಸಿಪಾಲಿಟಿಗಳ ನಿರ್ವಹಣಾ ಮಾರ್ಗದರ್ಶಿ’ ಇವುಗಳು ಮಂಜಪ್ಪ ಅವರ ಕೃತಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.